ADVERTISEMENT

ಸರ್ಕಾರಿ ಬಾಲಮಂದಿರ, ಬಾಲಭವನ ಕಟ್ಟಡಕ್ಕೆ ಭೂಮಿಪೂಜೆ: ಸಚಿವ ಹಾಲಪ್ಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:32 IST
Last Updated 26 ಜನವರಿ 2023, 5:32 IST
ಕೊಪ್ಪಳ ತಾಲ್ಲೂಕಿನ ಟನಕನಕಲ್ ಗ್ರಾಮದಲ್ಲಿ ಬುಧವಾರ ನಡೆದ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರ, ಬಾಲಭವನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್‌ ಮಾತನಾಡಿದರು
ಕೊಪ್ಪಳ ತಾಲ್ಲೂಕಿನ ಟನಕನಕಲ್ ಗ್ರಾಮದಲ್ಲಿ ಬುಧವಾರ ನಡೆದ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರ, ಬಾಲಭವನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್‌ ಮಾತನಾಡಿದರು   

ಕೊಪ್ಪಳ: ‘ಸಂವಿಧಾನದ ಆಶಯದಂತೆ ನೊಂದ, ಅನಾಥ ಮಕ್ಕಳ ಸುರಕ್ಷತೆ ಸರ್ಕಾರದ ಜವಾಬ್ದಾರಿಯಾಗಿದ್ದು, ಅವರ ಪೋಷಣೆಗೆ ಜಾರಿಗೆ ತಂದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ತಾಲ್ಲೂಕಿನ ಟನಕನಕಲ್ ಗ್ರಾಮದಲ್ಲಿ ಬುಧವಾರ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರ, ಬಾಲಭವನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರಗಳು ಒಟ್ಟು ₹3.62 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿವೆ.

ADVERTISEMENT

‘ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇಲಾಖೆ ಮಾತ್ರ ಮಕ್ಕಳ ಯೋಜನೆಗಳನ್ನು ತಿಳಿಸುವುದಲ್ಲ. ಈ ನಿಟ್ಟಿನಲ್ಲಿ ಎಲ್ಲರ ಜವಾಬ್ದಾರಿ ಮತ್ತು ಸಾರ್ವಜನಿಕರ ಹೊಣೆಗಾರಿಕೆಯೂ ಇದೆ’ ಎಂದರು.

‘ಗರ್ಭಿಣಿಯರು, ಬಾಣಂತಿಯರು, ಬಾಲಕಿಯರಿಗೆ ಸಂಪೂರ್ಣ ಆರೋಗ್ಯ ಮತ್ತು ರಕ್ಷಣೆ ಕೊಡಲು ಕೇಂದ್ರದ ಶೇ 60 ಮತ್ತು ರಾಜ್ಯದ ಶೇ 40ರ ಹೊಂದಾಣಿಕೆಯಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ‘ಮಕ್ಕಳ ರಕ್ಷಣೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಸರಿಯಾಗಿ ಜನರಿಗೆ ತಲುಪಿಲ್ಲ. ಮಕ್ಕಳ ರಕ್ಷಣಾ ವಿಷಯಗಳ ಬಗ್ಗೆ ಸರಿಯಾದ ಪ್ರಚಾರ ಕೊಟ್ಟಲ್ಲಿ ನೊಂದ ಮಕ್ಕಳಿಗೆ ಅನುಕೂಲವಾಗುತ್ತದೆ’ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ ‘ಬಾಲಮಂದಿರ ಮತ್ತು ಬಾಲಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು, ಕಾಂಪೌಂಡ್‌ ನಿರ್ಮಾಣ ಸೇರಿದಂತೆ ಮತ್ತಷ್ಟು ಕಾಮಗಾರಿಗೆ ಅನುದಾನದ ಅಗತ್ಯವಿದೆ ಎಂದು ಇಲಾಖೆಯವರು ಹೇಳಿದ್ದಾರೆ. ಇದನ್ನೂ ಒದಗಿಸಲು ಹಾಲಪ್ಪ ಆಚಾರ್‌ ಕ್ರಮ ಕೈಗೊಳ್ಳಬೇಕು. ಸರ್ಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೇಲಿಂದ ಮೇಲೆ ನೊಂದ, ಅನಾಥ ಮಕ್ಕಳ ಬಗ್ಗೆ ನಿಗಾ ವಹಿಸಬೇಕು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಜಿ.ಪದ್ಮಾವತಿ ‘ಬಾಲಮಂದಿರಗಳಿಗೆ ಬಹುದಿನಗಳಿಂದ ಸ್ವಂತ ಕಟ್ಟಡಕ್ಕೆ ಬೇಡಿಕೆಯಿತ್ತು. ಅದು ಈಗ ಈಡೇರಿದೆ. ಅಗತ್ಯವಿರುವ ಇನ್ನಷ್ಟು ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು.

ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಚಂದ್ರಕಾಂತ ಎಂ.ವಿ., ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರುನ್ನುಮ್, ಓಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲವ್ವ ಹರಿಜನ, ಉಪಾಧ್ಯಕ್ಷ ಹುಚ್ಚಪ್ಪ ಬೋವಿ, ಯುನಿಸೆಫ್ ಜಿಲ್ಲಾ ಸಂಯೋಜಕ ಹರೀಶ ಜೋಗಿ, ಸಿಡಿಪಿಒಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಅಂಗನವಾಡಿ ಶಾಲೆಗಳಿಗೆ ರಜೆ!

ಕೊಪ್ಪಳ: ಟನಕನಕಲ್ ಗ್ರಾಮದ ಹೊರವಲಯದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುವಂತೆ ಕೊಪ್ಪಳ ನಗರ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಸೂಚನೆ ನೀಡಲಾಗಿತ್ತು. ಅದಕ್ಕಾಗಿ ಬುಧವಾರ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿತ್ತು.

ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದು ಕೆಲವರಲ್ಲಿ ಬೇಸರ ಮೂಡಿಸಿತ್ತು.

‘ನಮ್ಮ ಭಾಗದ ದೊಡ್ಡದಾದ ಗವಿಮಠದ ಜಾತ್ರೆಗಾಗಿ ಒಂದು ದಿನ ಸ್ಥಳೀಯ ರಜೆ ನೀಡುವಂತೆ ಮೇಲಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕೊಡಲಿಲ್ಲ. ಈಗ ಬಾಲಭವನ ಕೇಂದ್ರದ ಭೂಮಿಪೂಜೆಗೆ ಅಂಗನವಾಡಿ ಕೇಂದ್ರಗಳನ್ನೇ ಬಂದ್‌ ಮಾಡಲು ಹೇಳಿದ್ದು ಸರಿಯೇ’ ಎಂದು ಹಲವು ಕಾರ್ಯಕರ್ತೆಯರು ಪ್ರಶ್ನಿಸಿದರು. ಕಾರ್ಯಕ್ರಮಕ್ಕೆ ನಗರ ಮಾತ್ರವಲ್ಲದೇ ಗಂಗಾವತಿ, ಯಲಬುರ್ಗಾ, ಕನಕಗಿರಿ ಸೇರಿದಂತೆ ವಿವಿಧ ಕಡೆಯಿಂದ ಕಾರ್ಯಕರ್ತೆಯರು ಬಂದಿದ್ದರು.

ಗಂಗಾವತಿ ರೈಲು ನಿಲ್ದಾಣದಿಂದ ಅಂಜನಾದ್ರಿ ತನಕ ಕೇಬಲ್‌ ಕಾರ್‌ ಅಗತ್ಯತೆ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಸಂಗಣ್ಣ ಕರಡಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.