ADVERTISEMENT

ಆಸ್ತಿ ವ್ಯಾಜ್ಯ | ಮಂತ್ರಾಲಯದ ಶ್ರೀಗಳಿಂದ ಅಪ್ರಬುದ್ಧ ಹೇಳಿಕೆ: ವಿದ್ಯಾಧೀಶಾಚಾರ್ಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 16:44 IST
Last Updated 30 ನವೆಂಬರ್ 2024, 16:44 IST
   

ಗಂಗಾವತಿ: ‘ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ನವಬೃಂದಾವನ ಗಡ್ಡೆಯಲ್ಲಿ ಶುಕ್ರವಾರ ಮಾಧ್ಯಮಗಳ ಎದುರು ಅಪ್ರಬುದ್ಧ, ಅಸ್ಪಷ್ಟ, ಅಸತ್ಯ ಹೇಳಿಕೆ ನೀಡಿದ್ದಾರೆ. ಇದು ಅವರ ಪೀಠ ಪರಂಪರೆಗೆ ತಕ್ಕುದ್ದಲ್ಲ’ ಎಂದು ಉತ್ತರಾದಿ ಮಠದ ಮುಖ್ಯನಿರ್ವಹಣಾಧಿಕಾರಿ ಪಂ. ವಿದ್ಯಾಧೀಶಾಚಾರ್ಯ ಗುತ್ತಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಿವಾದ ಪರಿಹರಿಸಿಕೊಳ್ಳಲು ನಾವು ಸಿದ್ಧರಿದ್ದರೂ ಉತ್ತರಾದಿಮಠದವರು ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ’ ಎಂದು ಶುಕ್ರವಾರ ಸುಬುಧೇಂದ್ರ ತೀರ್ಥರು ಹೇಳಿದ್ದರು.

ಇದಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ವಿದ್ಯಾಧೀಶಾಚಾರ್ಯ, ‘ಪರ ಮಠದವರನ್ನು ಟೀಕಿಸುವ ಭರದಲ್ಲಿ, ಸುಬುಧೇಂದ್ರತೀರ್ಥರು ವಾಸ್ತವಾಂಶಗಳಿಗೆ ದೂರವಾದ ಹೇಳಿಕೆಗಳನ್ನು ನೀಡಿ ಮಾಧ್ವ ಸಮಾಜದಲ್ಲಿ ತಪ್ಪು ಸಂದೇಶ ಹರಡುತ್ತಿರುವಂತಿದೆ. ಸತ್ಯಕ್ಕೆ ದೂರವಾದ ಈ ತರಹದ ಅವರ ಹೇಳಿಕೆಗಳಿಂದ ಮಾಧ್ವ ಸಮಾಜದ ಕೋಟ್ಯಂತರ ಭಕ್ತಾದಿಗಳ ಮನವನ್ನೂ ನೋಯಿಸಿದಂತಿದೆ’ ಎಂದಿದ್ದಾರೆ.

ADVERTISEMENT

‘ನವಬೃಂದಾವನ ಗಡ್ಡೆ ಆಸ್ತಿ ವ್ಯಾಜ್ಯ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸುಬುಧೇಂದ್ರರು ನೀಡಿದ ಹೇಳಿಕೆ ಮಾಧ್ಯಮಗಳು ಸೇರಿದಂತೆ ಭಕ್ತರ, ಜನರ ದಾರಿತಪ್ಪಿಸುವಂತಿದೆ. ಪರ ಮಠೀಯರು ಸೌಹಾರ್ದಯುತ ಸಂಧಾನಕ್ಕಾಗಿ ಕಿಂಚಿತ್ತೂ ಪ್ರಯತ್ನ ಮಾಡುತ್ತಿಲ್ಲ ಎಂದಿರುವುದು, ಪರಮಠೀಯರಿಗೆ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವ ಅಪೇಕ್ಷೆ ಇಲ್ಲದಿರುವಾಗ ನ್ಯಾಯಾಲಯ ಮೂಲಕ ತಾವು ಬಗೆಹರಿಸಿಕೊಳ್ಳುವುದಾಗಿ ಸುಬುಧೇಂದ್ರತೀರ್ಥರು ಹೇಳಿದ್ದಾರೆ’ ಎಂದಿದ್ದಾರೆ.

‘ಸಾಮಾಜಿಕ ಕಳಕಳಿ, ಕಾಳಜಿ ಇಲ್ಲದವರು, ಮೊಂಡರು ಕಿವುಡರು ಎಂಬುದಾಗಿ ಮಂತ್ರಾಲಯ ಪರಂಪರೆಯ ಪೀಠಾಧಿಪತಿಗಳು ಅಪ್ರಬುದ್ಧವಾಗಿ ಉತ್ತರಾದಿಮಠವನ್ನು ಟೀಕಿಸಿದ್ದಾರೆ. ಇದು ಉತ್ತರಾದಿಮಠದ ಹಾಗೂ ಸಮಸ್ತ ಮಾಧ್ವ ಸಮುದಾಯದ ಜನರಿಗೆ ಘಾಸಿ ಉಂಟು ಮಾಡಿದೆ. ವಾಸ್ತವದಲ್ಲಿ, ನವಬೃಂದಾವನ ಗಡ್ಡೆ ವಿಚಾರವಾಗಿ ಈ ಹಿಂದೆ ಅನೇಕ ಬಾರಿ ಸೌಹಾರ್ದಯುತ ಮಾತುಕತೆಗೆ ಉತ್ತರಾದಿಮಠ ಮುಂದಾದಾಗ ಅವರೇ ಬೆನ್ನು ತೋರಿಸಿದ್ದಾರೆ. ಮಾಧ್ಯಮಗಳೆದುರು ಸಂಧಾನ ಬಗ್ಗೆ ಮಾತನಾಡುವ ಸುಬುಧೇಂದ್ರತೀರ್ಥರು, ನ್ಯಾಯಯುತ ಹಾಗೂ ಶಾಶ್ವತವಾದ ಸಂಧಾನಕ್ಕೆ ಒಪ್ಪಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.