ADVERTISEMENT

ಎಲ್ಲ ಕಾರ್ಖಾನೆಗಳ ವಿರುದ್ಧ ಹೋರಾಟ

ಜಿಲ್ಲಾ ಬಚಾವೊ ಆಂದೋಲನ ಸಮಿತಿ ತೀರ್ಮಾನ; ನಿರಂತರ ಧರಣಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಮೇ 2025, 14:36 IST
Last Updated 4 ಮೇ 2025, 14:36 IST
ಕೊಪ್ಪಳದಲ್ಲಿ ‌ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು
ಕೊಪ್ಪಳದಲ್ಲಿ ‌ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು   

ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಮಾಡಲು‌ ಮುಂದಾಗಿದೆ. ಇದೂ ಸೇರಿದಂತೆ ಜನ ಹಾಗೂ ಪರಿಸರಕ್ಕೆ ಮಾರಕವಾಗುವ ಎಲ್ಲಾ ಕಂಪನಿಗಳನ್ನು ಕೊಪ್ಪಳ ಬಿಟ್ಟು ತೊಲಗಿಸುವವರೆಗೆ ನಿರಂತರ ಹೋರಾಟ, ಸತ್ಯಾಗ್ರಹ ಹಾಗೂ ಚಳವಳಿ ನಡೆಸಲು ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನ ಸಮಿತಿ ನೇತೃತ್ವದಲ್ಲಿ ಭಾನುವಾರ ನಗರದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪರಿಸರ ಹಾಗೂ ಜನರಿಗೆ ಹಾನಿ ಮಾಡುವ ಕಾರ್ಖಾನೆಗಳ ವಿರುದ್ದ ಹೋರಾಟ ರೂಪಿಸಲು ಚರ್ಚಿಸುವ ಸಲುವಾಗಿ ನಡೆದ ಸಂಘಸಂಸ್ಥೆಗಳ, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಇಲ್ಲಿನ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಬಲ್ಡೋಟಾ ಕಾರ್ಖಾನೆ ವಿರುದ್ಧ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಅಂತಿಮ ನಿರ್ಣಯ ತೆಗೆದುಕೊಂಡಿದ್ದು, ಕೊಪ್ಪಳ ಮತ್ತು ಬಾಧಿತ ಪ್ರದೇಶಗಳ ಜನರನ್ನು ಸಜ್ಜುಗೊಳಿಸಬೇಕು. ಪ್ರಮುಖವಾಗಿ ಕೊಪ್ಪಳ ಹಾಗೂ ಭಾಗ್ಯನಗರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಪರಿಸರ ಜಾಗೃತಿ ಸಭೆ ನಡೆಸುವುದು. ನಗರದ ಅಶೋಕ ವೃತ್ತದಲ್ಲಿ ನಿರಂತರ ಧರಣಿ ಹಾಗೂ ಸತ್ಯಾಗ್ರಹ ಹಮ್ಮಿಕೊಂಡು ಪ್ರತಿಯೊಂದು ಸಂಘಟನೆಗಳನ್ನು ಅದರಲ್ಲಿ ತೊಡಗಿಸಿಕೊಳ್ಳುವುದು. ಕ್ಷೇತ್ರದ ಸುಮಾರು 35 ಸಾವಿರ ಕುಟುಂಬಗಳ ಪ್ರತಿಯೊಬ್ಬರಿಂದ ರಾಷ್ಟ್ರಪತಿ, ಪರಿಸರ ಸಚಿವಾಲಯ ಮತ್ತು ಹಸಿರು ನ್ಯಾಯಾಧೀಕರಣಕ್ಕೆ ಒಟ್ಟು ಮೂರರಂತೆ ಒಂದು ಲಕ್ಷ ಪತ್ರ ಬರೆಸುವ ಮೂಲಕ ಪತ್ರ ಚಳವಳಿ ನಡೆಸುವುದು. ನಂತರ ಹೋರಾಟದ ಮುಖ್ಯ ನೇತೃತ್ವವನ್ನು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ವಹಿಸಿಕೊಳ್ಳುವಂತೆ ಮತ್ತು ಜಿಲ್ಲೆಯ ಎಲ್ಲಾ ಮಠಾಧೀಶರು ಭಾಗವಹಿಸುವಂತೆ ಮನವಿ ಸಲ್ಲಿಸುವುದು ಸೇರಿದಂತೆ ನಿರಂತರ ಜನ ಹೋರಾಟವಾಗಿ ರೂಪಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರ್ಣಯ ಅಂಗೀಕರಿಸಲಾಯಿತು.

ADVERTISEMENT

ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕಾಶಿನಾಥ ಪಾಟೀಲ್, ಹೋರಾಟಗಾರ ಜನಾರ್ದನ, ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ವಕೀಲರಾದ ರಾಜು ಬಾಕಳೆ ಮತ್ತು ಪೀರಾಹುಸೇನ್ ಹೊಸಳ್ಳಿ, ಪತ್ರಕರ್ತ ಸೋಮರಡ್ಡಿ ಅಳವಂಡಿ, ವರ್ತಕರಾದ ಪ್ರಭು ಹೆಬ್ಬಾಳ ಮತ್ತು ಬಸವರಾಜ ಬಳ್ಳೊಳ್ಳಿ, ರೈತ ಮುಖಂಡರಾದ ನಜೀರ್‌ಸಾಬ್ ಮೂಲಿಮನಿ ಮತ್ತು ಹನುಮಂತಪ್ಪ ಹೊಳೆಯಾಚೆ, ವಕೀಲ ಶಿವಾನಂದ ಹೊಸಮನಿ ಮತ್ತು ಬಿ.ಎಸ್.ವೀರಾಪೂರ, ಸಾವಿತ್ರಿ ಮುಜುಂದಾರ, ಸಂಘಟಕರಾದ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಡಿ.ಎಚ್.ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಸಂತೋಷ ದೇಶಪಾಂಡೆ, ಶರಣು ಪಾಟೀಲ ಇತರರು ಮಾತನಾಡಿದರು.

ಗವಿಶ್ರೀ ನೇತೃತ್ವದಲ್ಲಿ ಎಲ್ಲ ಮಠಾಧೀಶರು ಹತ್ತು ಸಾವಿರ ಜನರೊಂದಿಗೆ ಕಂಪನಿಯನ್ನು ಲಾಕ್ ಮಾಡಿ ಹೋರಾಟ ಮಾಡಬೇಕು. ಪ್ರಗತಿಪರರು, ಶಿಕ್ಷಣ ಸಂಸ್ಥೆಗಳು, ವಕೀಲರು, ವೈದ್ಯರು, ಮಹಿಳಾ ಸಂಘಟನೆಗಳು ಒಂದೊಂದು ದಿನ ನಿರಂತರವಾಗಿ ಹೋರಾಟ ಮಾಡಬೇಕು. ಕ್ರಾಂತಿಯ ಮೂಲಕ ಹೋರಾಟ ಮಾಡೋಣ. ಅಕ್ರಮವಾಗಿ ಹಾಕಿದ ಕಂಪೌಂಡ್ ಒಡೆಯುವುದು ಸೇರಿದಂತೆ ಏಳೆಂಟು ತಂಡಗಳನ್ನು ಮಾಡಿ ಜೈಲ್ ಭರೋ ಕಾರ್ಯಕ್ರಮ ಸೇರಿ ಹೋರಾಟದ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಲು ನಿರ್ಧರಿಸಲಾಗಿದೆ.

ಜನರ ದೇಣಿಗೆ ಮೂಲಕ ಹೋರಾಟ ಕಟ್ಟಿ ಜನಪರ ಹೋರಾಟವಾಗಿಸಲು ಶೀಘ್ರ ದಿನಾಂಕ ಗೊತ್ತುಪಡಿಸಿ ಪ್ರಮುಖರ ಸಭೆ ಮಾಡಿ ಹೋರಾಟಕ್ಕೆ ಅಣಿಯಾಗಲು ಸಭೆಯಲ್ಲಿ ಪಾಲ್ಗೊಂಡಿದ್ದವರು ಸಲಹೆ ನೀಡಿದರು.

ಪ್ರಮುಖರಾದ ಅಂದಣ್ಣ ಅಗಡಿ, ಸಿದ್ದಣ್ಣ ನಾಲ್ವಾಡ, ಡಾ.ಚಂದ್ರಶೇಖರ ಕರಮುಡಿ, ಮಹಾಂತೇಶ ಮಲ್ಲನಗೌಡರ, ಶರಣು ಡೊಳ್ಳಿನ, ಕಾಶಪ್ಪ ಛಲವಾದಿ, ಬಿ.ಜಿ.ಕರಿಗಾರ, ವೈ.ಬಿ.ಬಂಡಿ, ನಿವೃತ್ತ ಪ್ರಾಚಾರ್ಯ ರಾಜೂರ, ವಿಪಿನ್ ತಾಲೇಡಾ, ಮುದುಕಪ್ಪ, ರವಿ ಕಾಂತನವರ, ಮೌನೇಶ ಬಡಿಗೇರ ಸೇರಿ ಅನೇಕರು ಹಾಜರಿದ್ದರು. ಬಸವರಾಜ ಶರಣು ಗಡ್ಡಿ ಕ್ರಾಂತಿ ಗೀತೆ ಹಾಡಿದರು.

ಕೊಪ್ಪಳದಲ್ಲಿ ‌ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು

‘ಮೋಸ ಮಾಡಿದವರಿಗೆ ಶಾಪ ತಟ್ಟಲಿದೆ’

ಕೊಪ್ಪಳ ಬಂದ್ ಸಮಯದಲ್ಲಿ ಗವಿಶ್ರೀ ಜನಪ್ರತಿನಿಧಿಗಳಿಗೆ ಬಿ.ಎಸ್.ಪಿ.ಎಲ್. ಕಾರ್ಖಾನೆ ಬರದಂತೆ ಆದೇಶ ತೆಗೆದುಕೊಂಡೇ ಕೊಪ್ಪಳಕ್ಕೆ ಬನ್ನಿ ಎಂದಿದ್ದರು. ಆದರೆ ಇದು ಆಗಿಲ್ಲ. ಇದರಿಂದ ಗವಿಶ್ರೀ ನೊಂದಿದ್ದಾರೆ. ಅವರಿಗೆ ಮೋಸ ಮಾಡಿದವರಿಗೆ ಗವಿಶ್ರೀ ಶಾಪ ತಟ್ಟುತ್ತದೆ. ಅವರಿಗೆ ಉಳಿಗಾಲ ಇಲ್ಲ. ವಕೀಲರನ್ನು ಕಡೆದುಕೊಂಡು ಬಂದು ಹೋರಾಟದಲ್ಲಿ ಭಾಗವಹಿಸುತ್ತೇವೆ ಎಂದು ವಕೀಲ ಪೀರಾ ಹುಸೇನ್ ಹೊಸಳ್ಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.