ADVERTISEMENT

ಕೊಪ್ಪಳ: ಕರ ಸೇವಕರ ಬಂಧನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 15:57 IST
Last Updated 4 ಜನವರಿ 2024, 15:57 IST
ಕೊಪ್ಪಳದಲ್ಲಿ ಗುರುವಾರ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಕೊಪ್ಪಳದಲ್ಲಿ ಗುರುವಾರ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಕೊಪ್ಪಳ: ಹುಬ್ಬಳ್ಳಿಯಲ್ಲಿ ಕರ ಸೇವಕರ ಬಂಧನ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಸಂಜೆ ಇಲ್ಲಿನ ಪೊಲೀಸ್ ಉಪಾಧೀಕ್ಷರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಾನೂ ಕರ ಸೇವಕ, ನಮ್ಮನ್ನು ಬಂಧಿಸಿ ಎಂದು ಆಗ್ರಹಿಸಿದರು.

ರಾಮ ಭಕ್ತರ ಮೇಲೆ ತುಘಲಕ್ ದರ್ಬಾರ್ ಮಾಡುತ್ತಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ನಮ್ಮೆಲ್ಲರ ಮೇಲೆ ದೌರ್ಜನ್ಯ ಮಾಡುತ್ತಿದೆ. ತ್ವರಿತವಾಗಿ ಕರ ಸೇವಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. 

ವೇದಿಕೆಯ ಜಿಲ್ಲಾ ಸಂಚಾಲಕ ಸಂಜೀವ ಜರಗುಂಟಿ ಮಾತನಾಡಿ ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದೇ ಶುಭ ಸಂದರ್ಭ ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಕರಸೇವಕ ಶ್ರೀಕಾಂತ ಪೂಜಾರಿ ಅವರನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದೆ’ ಎಂದು ಆರೋಪಿಸಿದರು.

ADVERTISEMENT

ರಾಮಮಂದಿರ ಉದ್ಘಾಟನೆ ಸಂಭ್ರಮ ಕುಗ್ಗಿಸುವ ಭಾಗವಾಗಿ ಶ್ರೀಕಾಂತ್ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಪದೇ ಪದೇ ಉದ್ದೇಶಪೂರ್ವಕವಾಗಿ ರಾಮಭಕ್ತರ ಬಂಧನ ಮಾಡುತ್ತಿದೆ. ಶ್ರೀಕಾಂತ್ ಅವರನ್ನು ಬಂಧಿಸಿ ಎಂದು ಯಾವ ಅಲ್ಪಸಂಖ್ಯಾತರು ಹೇಳಿರಲಿಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವವರನ್ನು ಬಿಡುಗಡೆ ಮಾಡುತ್ತಿದೆ ಎಂದು ಆಪಾದಿಸಿದರು.

ವೇದಿಕೆಯ ಪ್ರಮುಖರಾದ ಗವಿರಾಜ ಎಂ. ಗೊರವರ, ಶರಣು ಗುಳದಾಳ್‌, ಅಕ್ಷಯ್‌ ಜ್ಞಾನಮೋಟೆ, ಅರುಣ ಹೂಗಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.