ಗಂಗಾವತಿ: ತಾಲ್ಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಾಗಿದ್ದು, ನಿಯಂತ್ರಿಸಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಕೂಡಲೇ ಮೇಲಧಿಕಾರಿಗಳು ಗಂಗಾವತಿ ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಕರ್ನಾಟಕ ದಸಂಸ ಸದಸ್ಯರು ಸೋಮವಾರ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಸಿ.ಕೆ ಮರಿಸ್ವಾಮಿ ಮಾತನಾಡಿ, ‘ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕಿನ ಬಾರ್‌ಗಳು ಅಬಕಾರಿ ಇಲಾಖೆ ನಿಯಮಗಳು ಉಲ್ಲಂಘಿಸಿ, ಕಾರ್ಯನಿರ್ವಹಿಸುತ್ತಿವೆ. ಸರಿಪಡಿಸಬೇಕಾದ ಅಧಿಕಾರಿಗಳು ಸುಮ್ಮನಿರುತ್ತಿದ್ದಾರೆ. ಇನ್ನೂ ಸಿಎಲ್- 2 ಪರವಾನಗಿ ಪಡೆದ ಮದ್ಯ ಮಾರಾಟಗಾರರು ಅಂಗಡಿಯಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದಾರೆ. ಅಬಕಾರಿ ಇಲಾಖೆ ನಿಯಮದ ಪ್ರಕಾರ ಸಿಎಲ್-2 ಪರವಾನಗಿ ಪಡೆದವರು ಎಂಆರ್‌ಪಿ ದರಕ್ಕೆ ಮದ್ಯ ಮಾರಾಟ ಮಾಡಬೇಕು. ಆದರೆ ಮಾಲೀಕರು ಅಧಿಕ ಬೆಲೆಗೆ ಮದ್ಯ ಮಾರಾಟ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಗ್ರಾಮೀಣ ಭಾಗದ ಅಂಗಡಿ, ಗುಡಿಸಲು, ಮನೆಗಳಲ್ಲಿ ಎಗ್ಗಿಲ್ಲದೆ ಮದ್ಯ ಅಕ್ರಮ ಮಾರಾಟ ಜರುಗುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಕಿಂಚತ್ತು ತಲೆಕೆಡಿಸಿಕೊಳ್ಳುತ್ತಿಲ್ಲ. ಮದ್ಯ ಸೇವನೆಯಿಂದ ಬಹುತೇಕ ಕುಟುಂಬಗಳ ಬೀದಿಗೆ ಬಿಳುತ್ತಿವೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆ ಮರಿಯಪ್ಪ, ಹರಿಕೃಷ್ಣ, ನಾಗರಾಜ, ಸಮೀರ್, ಕುಮಾರ, ವೀರೇಶ, ದುರುಗೇಶ, ವಿಜಯ್, ತಿಪ್ಪಣ್ಣ, ಅನ್ವರ್, ದುರುಗೇಶ, ಸುಭಾನ್‌ಸಾಬ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.