ADVERTISEMENT

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷಮೆಗೆ ಆಗ್ರಹ

ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:15 IST
Last Updated 15 ಏಪ್ರಿಲ್ 2024, 16:15 IST
ಕೊಪ್ಪಳದ ಅಶೋಕ ವೃತ್ತದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಕೊಪ್ಪಳದ ಅಶೋಕ ವೃತ್ತದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಕೊಪ್ಪಳ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾ ಮಹಿಳಾ ಕಾಂಗ್ರೆಸ್​ ಘಟಕದ ಪದಾಧಿಕಾರಿಗಳು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಬಡವರ ಬದುಕು ಹಸನಾಗಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದೆ. ಆದರೂ ವಿನಾಕಾರಣ ಟೀಕೆ ಮಾಡಲಾಗುತ್ತಿದೆ. ಬಡವರ ನೋವು ಹಾಗೂ ಕಷ್ಟ ಎನೆಂಬುದು ತಿಳಿಯದವರು ಮಾತ್ರ ಹೀಗೆ ಮಾತನಾಡಲು ಸಾಧ್ಯ’ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

‘ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ಹಗುರವಾಗಿ ಮಾತನಾಡಿದ್ದಾರೆ. ಹೇಳಿಕೆ ನೀಡಿ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ. ಅವರ ಮನೆಯಲ್ಲೂ ಹೆಣ್ಣುಮಕ್ಕಳಿಲ್ಲವೇ? ಎಂದು ಮಹಿಳಾ ಪದಾಧಿಕಾರಿಗಳು ಪ್ರಶ್ನಿಸಿದರು.

ADVERTISEMENT

‘ಗ್ಯಾರಂಟಿ ಯೋಜನೆಗಳಿಂದ ಜನರು ಕಾಂಗ್ರೆಸ್​ನತ್ತ ಒಲವು ಹೊಂದಿದ್ದಾರೆ. ಇದರಿಂದ ವಿಚಲಿತರಾದ ವಿರೋಧ ಪಕ್ಷದವರು ಭ್ರಮನಿರಸನಗೊಂಡು ಹೀಗೆಲ್ಲ ಮಾತನಾಡುತ್ತಿದ್ದಾರೆ. ರಾಜಕೀಯವಾಗಿ ಟೀಕೆ ಹಾಗೂ ಪ್ರತಿ ಟೀಕೆ ಸಹಜ. ಆದರೆ ಮಹಿಳಾ ಸಂಕುಲಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದು ಸರಿಯಲ್ಲ. ಮಹಿಳೆಯರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಮಹಿಳೆಯರ‌ ಬಗ್ಗೆ ಮಾಜಿ ಶಾಸಕ ಸಂಜಯ್​ ಪಾಟೀಲ್​ ಸಹ ಅಸಭ್ಯವಾಗಿ ಮಾತನಾಡಿದ್ದೂ ಅದು ಸರಿಯಲ್ಲ. ಕುಮಾರಸ್ವಾಮಿ ಹಾಗೂ ಸಂಜಯ್ ಪಾಟೀಲ್ ಜನರ ಬಳಿ ಕ್ಷಮೆಯಾಚನೆ ಮಾಡಬೇಕು, ಇಲ್ಲವಾದರೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ ಮಾತನಾಡಿದರು. ಪ್ರಮುಖರಾದ ರೇಷ್ಮಾಬೇಗಂ, ಸಾವಿತ್ರಿ ಮುಜುಮದಾರ, ಸವಿತಾ ಗೋರಂಟ್ಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.