ADVERTISEMENT

‘ರಾಯಣ್ಣಗೆ ಅವಮಾನ: ಕಿಡಿಗೇಡಿಗಳ ಬಂಧಿಸಿ’

ಹಾಲುಮತ ಮಹಾಸಭಾದ ವತಿಯಿಂದ ಪ್ರತಿಭಟನೆ, ಸರ್ಕಾರಕ್ಕೆ ಒತ್ತಾಯ: ಗಂಗಾವತಿಯಲ್ಲಿ ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 5:49 IST
Last Updated 21 ಡಿಸೆಂಬರ್ 2021, 5:49 IST
ಕುಷ್ಟಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು
ಕುಷ್ಟಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು   

ಕುಷ್ಟಗಿ: ‘ಇಲ್ಲಿಯ ನೆಲ, ಜಲ ಹಾಗೂ ಸರ್ಕಾರದ ಎಲ್ಲ ಸೌಲತ್ತುಗಳನ್ನು ಬಳಸಿಕೊಂಡು ಕನ್ನಡನಾಡಿಗೆ ದ್ರೋಹ ಬಗೆಯುವ ಮೂಲಕ ಪದೇ ಪದೇ ಶಾಂತಿ ಕದಡುತ್ತಿರುವ ದೇಶದ್ರೋಹಿ ಪುಂಡರನ್ನು ಗೂಂಡಾಕಾಯ್ದೆ ಅಡಿ ಬಂಧಿಸಬೇಕು’ ಎಂದು ಹಾಲುಮತ ಮಹಾಸಭಾ ಸರ್ಕಾರವನ್ನು ಒತ್ತಾಯಿಸಿದೆ.

ಬೆಳಗಾವಿಯಲ್ಲಿ ದಾಂಧಲೆ ನಡೆಸಿರುವುದು, ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಧ್ವಂಸಗೊಳಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಸಮುದಾಯದ ಪ್ರಮುಖರು, ಕಾರ್ಯಕರ್ತರು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿಯನ್ನು ಗ್ರೇಡ್‌–2 ತಹಶೀಲ್ದಾರ್ ಎಂ.ಮುರಳೀಧರ ಅವರಿಗೆ ಸಲ್ಲಿಸಿದರು.

ಬಸವೇಶ್ವರ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ,‘ಕನ್ನಡ ನಾಡಿನಲ್ಲಿ ಭಾಷೆ, ನೆಲ, ಜಲ ವಿಚಾರ ಬಂದಾಗ ಕನ್ನಡಿಗರೆಲ್ಲ ಒಟ್ಟಾಗಿದ್ದೇವೆ. ಕನ್ನಡಿಗರ ಸ್ವಾಭಿಮಾನ ಕೆಣಕುವುದು ಮರಾಠಿ ಪುಂಡರಿಗೆ ಸಾಮಾನ್ಯ ಎನಿಸಿದೆ. ಅಷ್ಟೇ ಅಲ್ಲ ಯಾವುದೇ ಜಾತಿಗೆ ಸೀಮಿತವಾಗದ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನೂ ಧ್ವಂಸ ಮಾಡಿರುವುದು ಅತಿರೇಕದ ಪರಮಾವಧಿಯಾಗಿದೆ. ಇಂಥ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅಲ್ಲದೆ ಸಂಗೊಳ್ಳಿ ರಾಯಣ್ಣ ಮೂರ್ತಿ ಪುನಃ ಪ್ರತಿಷ್ಠಾಪನೆ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ’ ಎಂದರು. ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕೆಲ ಪ್ರಮುಖರು,‘ಇಲ್ಲಿಯೇ ಇದ್ದು, ಅನ್ನ, ನೀರು ಇತರೆ ಎಲ್ಲ ಅನುಕೂಲಗಳನ್ನೂ ಬಳಸಿಕೊಳ್ಳುವ ಮರಾಠಿ ಸಮುದಾಯದ ಎಂಇಎಸ್‌ನ ಕೆಲ ಕಿಡಿಗೇಡಿಗಳು ಅನ್ನ ನೀಡಿದ ಮನೆಗೆ ಕನ್ನ ಹಾಕುವ ಕುಕೃತ್ಯವನ್ನು ನಡೆಸುತ್ತಿರುವುದು ದೇಶದ್ರೋಹವಲ್ಲದೆ ಬೇರೆ ಏನೂ ಅಲ್ಲ. ಇಂಥ ಬೆರಳೆಣಿಕೆ ಪುಂಡರಿಂದಾಗಿ ಕನ್ನಡ ನಾಡಿನಲ್ಲಿ ಪದೇ ಪದೇ ಭಾಷೆ, ಗಡಿ ಹೆಸರಿನಲ್ಲಿ ದಾಂಧಲೆಗಳು ನಡೆಯುತ್ತಿವೆ’ ಎಂದರು.

ADVERTISEMENT

ಹಾಲುಮತ ಮಹಾಸಭಾದ ಪ್ರಮುಖರಾದ ಮಲ್ಲಣ್ಣ ಪಲ್ಲೇದ, ವಕೀಲರಾದ ಫಕೀರಪ್ಪ ಚಳಗೇರಿ, ಹೊಳಿಯಪ್ಪ ಕುರಿ, ಪುರಸಭೆ ಸದಸ್ಯ ಕಲ್ಲೇಶ ತಾಳದ, ಶರಣಪ್ಪ ಚೂರಿ, ಪರಶುರಾಮ ಅರಹುಣಸಿ, ಚಂದ್ರಕಾಂತ ವಡಗೇರಿ, ಚನ್ನಪ್ಪ ನಾಲಗಾರ, ಕರವೇ ಪ್ರಮುಖ ಅಜ್ಜಪ್ಪ ಕರಡಕಲ್ ಹಾಗೂ ಬಸವರಾಜ ಗಾಣಿಗೇರ ಸೇರಿ ಹಲವರು ಇದ್ದರು.

ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಗಂಗಾವತಿ: ‘ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಎಂಇಎಸ್ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸೋಮವಾರ ಹಾಲುಮತ ಕುರುಬ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ಕುರುಬರ ಸಮಾಜದ ಮುಖಂಡ ಯಮನಪ್ಪ ವಿಠಲಾಪುರ ಮಾತನಾಡಿ,‘ನಾಡಿನಲ್ಲಿ ಅಂಶಾತಿ ಉಂಟು ಮಾಡಲು ಕೆಲ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದಾರೆ. ಅಂಥ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಕೆಲಸವಾಗಬೇಕು’ ಎಂದರು.

ದೇಶಕ್ಕಾಗಿ ತನ್ನ ಇಡೀ ಜೀವನವನ್ನೆ ಮುಡಿಪಿಟ್ಟು, ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣನಿಗೆ ಇಡೀ ದೇಶವೇ ತಲೆಬಾಗಿ ಗೌರವ ನೀಡುತ್ತದೆ. ಅಂಥ ಮಹಾನ್ ವ್ಯಕ್ತಿಯ ಮೂರ್ತಿ ಭಗ್ನಗೊಳಿಸಿರುವುದು ಖಂಡನೀಯ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ ಮಾತನಾಡಿ,‘ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಿಗೊಳಿಸಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ದುರ್ವತನೆ ಖಂಡನೀಯ. ಇಂಥ ದೇಶದ್ರೋಹಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ದೇಶದಿಂದ ಬಹಿಷ್ಕರಿಸಬೇಕು’ ಎಂದರು.

ಸಂಗೊಳ್ಳಿ ರಾಯಣ್ಣ ಮೂರ್ತಿ ವಿರೂಪಕ್ಕೆ ಕಾರಣರಾದ ಕಿಡಿಗೇಡಿಗಳನ್ನು ಸರ್ಕಾರ ಕೂಡಲೇ ಬಂಧನಕ್ಕೆ ಒಳಪಡಿಸಬೇಕು. ನಂತರ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ರಾಜ್ಯದಲ್ಲಿ ಎಂಇಎಸ್ ಸಂಘಟನೆಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಗ್ರೇಡ್-2 ತಹಶೀಲ್ದಾರ್ ವಿ.ಎಚ್.ಹೊರಪೇಟಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆರಂಭದಲ್ಲಿ ಕೊಪ್ಪಳ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಗಾಂಧಿ ವೃತ್ತ ಮಾರ್ಗವಾಗಿ, ತಹಶೀಲ್ದಾರರ ಕಚೇರಿವರೆಗೂ ಬೈಕ್ ರ‍್ಯಾಲಿ ನಡೆಸಲಾಯಿತು.

ಈ ವೇಳೆ ಸಮಾಜದ ಮುಖಂಡರು, ಯುವಕರು ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಸಿದ್ದರಾಮಯ್ಯ ಗುರುವಿನ, ಯಮನಪ್ಪ ವಿಠಲಾಪುರ, ಸಣ್ಣಕ್ಕಿ ನೀಲಪ್ಪ, ಶರಣೇಗೌಡ, ಕೆ.ವೆಂಕಟೇಶ, ನೀಲಕಂಠ ಹೊಸಳ್ಳಿ, ಮೋರಿ ದುರಗಪ್ಪ, ಬೆಟ್ಟಪ್ಪ, ಡಣಾಪುರ ಬೀರೇಶ, ಫಕಿರಯ್ಯ, ಮೈಲಾರಪ್ಪ, ಮುಕ್ಕಣ್ಣ, ಯಮನಪ್ಪ ಪುಂಡಗೌಡ, ವೆಂಕಟೇಶ ಸಿಂಗನಾಳ, ಮಂಜು ಹೊಸಳ್ಳಿ, ಶಿವು ಡಣಾಪುರ ವಕೀಲರು, ವೀರನಗೌಡ ವಡ್ಡರಹಟ್ಟಿ, ಸಿದ್ದಲಿಂಗಪ್ಪ ಗೌಡ, ಬಸವರಾಜ ಸಂಗಟಿ, ಶಿವು ಹೊಸಳ್ಳಿ ಹಾಗೂ ಶರಣಬಸವ ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.