ADVERTISEMENT

ಕೊಪ್ಪಳ: ಉಪನ್ಯಾಸಕರ ಕೊರತೆ ನಡುವೆಯೇ ಪದವಿಪೂರ್ವ ಕಾಲೇಜುಗಳು ತರಗತಿ ಆರಂಭ

ಜಿಲ್ಲೆಯಲ್ಲಿ ಶೇ. 50ರಷ್ಟು ಬೋಧಕರ ಕೊರತೆ, ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ

ಪ್ರಮೋದ ಕುಲಕರ್ಣಿ
Published 3 ಜೂನ್ 2025, 7:04 IST
Last Updated 3 ಜೂನ್ 2025, 7:04 IST
ಜಗದೀಶ್ ಜಿ.ಎಚ್‌.
ಜಗದೀಶ್ ಜಿ.ಎಚ್‌.   

ಕೊಪ್ಪಳ: ಪ್ರತಿ ವರ್ಷ ಫಲಿತಾಂಶ ಹೆಚ್ಚಳಕ್ಕೆ ಕಸರತ್ತು ಮಾಡುವ ಜಿಲ್ಲೆಯ ಪದವಿಪೂರ್ವ ಕಾಲೇಜುಗಳು ಸೋಮವಾರ ಪುನರಾರಂಭವಾಗಿದ್ದು, ಸರ್ಕಾರಿ ಕಾಲೇಜುಗಳಿಗೆ ಮಂಜೂರಾತಿಗಿಂತಲೂ ಶೇ. 50ರಷ್ಟು ಉಪನ್ಯಾಸಕರ ಕೊರತೆ ಕಾಡುತ್ತಿದೆ.

ಜಿಲ್ಲೆಯಲ್ಲಿ 50 ಸರ್ಕಾರಿ, 50 ಖಾಸಗಿ, 12 ಮೊರಾರ್ಜಿ ದೇಸಾಯಿ, ಒಂಬತ್ತು ಅನುದಾನಿತ ಮತ್ತು ಎರಡು ಕ್ರೈಸ್‌ ಸೇರಿ ಒಟ್ಟು 123 ಪದವಿಪೂರ್ವ ಕಾಲೇಜುಗಳು ಇವೆ. ಇದರಲ್ಲಿ ಒಂಬತ್ತು ಕಾಲೇಜುಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ನಿರ್ವಹಣೆಯಾಗುತ್ತವೆ. ಇದೇ ವರ್ಷದಲ್ಲಿ ಇನ್ನಷ್ಟು ಕಾಲೇಜುಗಳು ಮಂಜೂರಾಗುವ ಸಾಧ್ಯತೆಯೂ ದಟ್ಟವಾಗಿದೆ.

ಒಂಬತ್ತು ಸರ್ಕಾರಿ ಕಾಲೇಜುಗಳಿಗೆ ನಿರ್ವಹಣೆ, ಸಿಬ್ಬಂದಿ ವೇತನ ಹಾಗೂ ಇನ್ನಿತರ ಉದ್ದೇಶಕ್ಕೆ ಕೆಕೆಆರ್‌ಡಿಬಿ ಅನುದಾನದಿಂದಲೇ ಮೂರು ವರ್ಷಗಳ ತನಕ ಹಣ ಪಾವತಿಯಾಗುತ್ತದೆ. ಖಾಸಗಿ ಹಾಗೂ ಅನುದಾನಿತ ಕಾಲೇಜುಗಳು ತಮ್ಮ ಸಂಸ್ಥೆಗೆ ಅನುಗುಣವಾಗಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತಿವೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಪ್ರಮುಖವಾಗಿ ಕಾಡುತ್ತಿದೆ. ಜಿಲ್ಲೆಗೆ ಒಟ್ಟು 415 ಉಪನ್ಯಾಸಕರ ಹುದ್ದೆಗಳು ಮಂಜೂರು ಇದ್ದು ಇದರಲ್ಲಿ 209 ಮಾತ್ರ ಕಾಯಂ ಉಪನ್ಯಾಸಕರು ಇದ್ದಾರೆ. ಪ್ರತಿ ವರ್ಷ ಅತಿಥಿ ಉಪನ್ಯಾಸಕರ ಮೇಲೆಯೇ ಕಾಲೇಜುಗಳು ಅವಲಂಬಿತವಾಗಿವೆ. ಈ ಬಾರಿ 206 ‘ಅತಿಥಿ’ಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರದಿಂದ ಆದೇಶ ಬರಬೇಕಿದೆ.

ADVERTISEMENT

ಉಪನ್ಯಾಸಕರ ಕೊರತೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ವರ್ಷದಿಂದ ವರ್ಷಕ್ಕೆ ಪರಿಣಾಮ ಬೀರುತ್ತಲೇ ಸಾಗಿದೆ. ಕೊಪ್ಪಳ ಜಿಲ್ಲೆ ಕಳೆದ ವರ್ಷ ಶೇ. 75ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 22ನೇ ಸ್ಥಾನ ಪಡೆದುಕೊಂಡಿತ್ತು. ಈ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಫಲಿತಾಂಶ ಶೇ. 67.02ರಷ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ. 7.98ರಷ್ಟು ಫಲಿತಾಂಶ ಕಡಿಮೆಯಾಗಿ ರಾಜ್ಯಮಟ್ಟದಲ್ಲಿ ಜಿಲ್ಲೆ ಒಂದು ಸ್ಥಾನ ಕುಸಿತ ಕಂಡಿದೆ. ಒಟ್ಟು 14,331 ವಿದ್ಯಾರ್ಥಿಗಳಲ್ಲಿ 9,631 ಜನ ಉತ್ತೀರ್ಣರಾಗಿದ್ದಾರೆ.

ಕಾಯಂಗೆ ಹೊರೆ: ಸಿಬ್ಬಂದಿ ಸಮಸ್ಯೆ ಕೊರತೆ ಕಾಯಂ ಉಪನ್ಯಾಸಕಾರ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ.  ಕಾಯಂ ನೌಕರರು ತಮ್ಮ ಕಾಲೇಜಿನ ನಿರ್ವಹಣೆ ಜೊತೆಗೆ ಸಮೀಪದ ಕಾಲೇಜುಗಳಿಗೆ ಹೋಗಿಯೂ ಪಾಠ ಮಾಡಬೇಕಾಗಿದೆ. ಜೊತೆಗೆ ಹೆಚ್ಚುವರಿ ಪ್ರಾಚಾರ್ಯ ಜವಾಬ್ದಾರಿ ನಿರ್ವಹಿಸಬೇಕಾಗಿದೆ.

ಕಾಲೇಜು ಆರಂಭ: ಪರೀಕ್ಷೆಯ ನಂತರ ರಜೆಯ ಮೂಡ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಸೋಮವಾರ ಕಾಲೇಜು ಮರಳಿ ಆರಂಭವಾಯಿತು. ಡಿಡಿಪಿಐ ಜಗದೀಶ್ ಜಿ.ಎಚ್‌. ಹಾಗೂ ಸಿಬ್ಬಂದಿ ನಗರದ ಕೆಲ ಸರ್ಕಾರಿ ಕಾಲೇಜುಗಳಿಗೆ ತೆರಳಿ ಶುಭಕೋರಿದರು.   

ನಾಲ್ಕು ಹೈಸ್ಕೂಲು

ಈಗ ಪಿಯು ಕಾಲೇಜು ಜಿಲ್ಲೆಯ ವಿವಿಧಡೆ ಆದರ್ಶ ಹೈಸ್ಕೂಲುಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಕೇಂದ್ರಗಳಲ್ಲಿ ಹೊಸದಾಗಿ ಪಿಯುಸಿ ತರಗತಿಗಳನ್ನು ಆರಂಭಿಸಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೊಪ್ಪಳ ತಾಲ್ಲೂಕಿನ ಟಣಕನಕಲ್‌ ಕುಕನೂರು ತಾಲ್ಲೂಕಿನ ಇಟಗಿ ಕುಷ್ಟಗಿ ತಾಲ್ಲೂಕಿನ ತಳುವಗೇರಾ ಮತ್ತು ಕನಕಗಿರಿಯ ಆದರ್ಶ ಹೈಸ್ಕೂಲುಗಳನ್ನು ಈಗ ಕಾಲೇಜುಗಳಾಗಿ ಮಾಡಲಾಗಿದೆ. ಅಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.