ADVERTISEMENT

ಆಸ್ಪತ್ರೆ ಉದ್ಘಾಟನೆಗೆ ರಾಯರಡ್ಡಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಮೇ 2021, 5:40 IST
Last Updated 10 ಮೇ 2021, 5:40 IST
ಕುಕನೂರಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ವೀಕ್ಷಿಸಿದರು
ಕುಕನೂರಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ವೀಕ್ಷಿಸಿದರು   

ಕುಕನೂರು: ‘ಪಟ್ಟಣದಲ್ಲಿ ₹10 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ 30 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಒಂದೂವರೆ ವರ್ಷ ಕಳೆದರೂ ಉದ್ಘಾಟನೆ ಆಗಿಲ್ಲ. ಸೋಮವಾರ (ಮೇ.10) ಉದ್ಘಾಟನೆಯಾಗದಿದ್ದರೆ ಲೋಕಾಯುಕ್ತ ಹಾಗೂ ಎಜೆಗೆ ದೂರು ನೀಡಲಾಗುವುದು’ ಎಂದು ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೀಮಾ ಮಾಬಳೆಗೆ ಹೇಳಿದರು.

ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಆಸ್ಪತ್ರೆ ಒಳಾಂಗಣ ಪರೀಶೀಲಿಸಿದರು. ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು. ಬಳಿಕ ಮಾತನಾಡಿದರು.

₹10 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಿರೋದು ಅಸ್ವಚ್ಛತೆ ಹಾಗೂ ಸಮರ್ಪಕವಾಗಿ ಬಳಕೆ ಆಗದ ಉದ್ದೇಶಕ್ಕೆಯೇ, ತಾಲ್ಲೂಕಿನಲ್ಲಿ ಶಿಶುಗಳ ಮರಣ ಪ್ರಮಾಣ ಹೆಚ್ಚಿರೋದು ಕಂಡು ನನ್ನ ಅಧಿಕಾರ ಅವಧಿಯಲ್ಲಿ ಕುಕನೂರಿಗೆ ಈ ಆಸ್ಪತ್ರೆ ಮಂಜೂರು ಮಾಡಿಸಿದ್ದೆ. ಸದ್ಯ ಕಟ್ಟಡ ನಿರ್ಮಾಣವಾಗಿ ಅದು ಉದ್ಘಾಟನೆ ಆಗದೆ ಬಳಕೆ ಆಗದಿರುವುದು ಯಾವ ಪುರುಷಾರ್ಥಕ್ಕೆ ಎಂದು ಅವರು ಹೇಳಿದರು.

ADVERTISEMENT

ಶಾಸಕರು, ಸಚಿವರು, ಸಂಸದರು ಬರಲಿ, ಬರದೆ ಇರಲಿ ಮೇ.10ರ ಸಂಜೆಯೊಳಗೆ ಈ ಆಸ್ಪತ್ರೆ ಉದ್ಘಾಟನೆ ಆಗಿ ಸಾರ್ವಜನಿಕರ ಹಿತಾಶಕ್ತಿಗೆ ಸೀಮಿತ ಆಗಬೇಕು. ಇಲ್ಲದಿದ್ದರೆ ಲೋಕಾಯುಕ್ತ ಹಾಗೂ ಎಜೆಗೆ ದೂರು ನೀಡಬೇಕಾಗುತ್ತದೆ. ಯಾವ ಕಾನೂನಿನಲ್ಲೂ ಶಾಸಕರೇ ಬಂದು ಉದ್ಘಾಟಿಸಬೇಕು ಎಂದಿಲ್ಲ. ಸಂಪ್ರದಾಯಕ್ಕೆ ಶಾಸಕ, ಸಂಸದರ ಆಹ್ವಾನ ಮಾತ್ರ. ಅವರು ದಿನಾಂಕ ನಿಗದಿ ಮಾಡಿಲ್ಲ ಎಂದು ಉದ್ಘಾಟನೆ ಮಾಡದೆ ಬಿಟ್ಟರೆ ಏನರ್ಥ ಎಂದು ವೈದ್ಯಾಧಿಕಾರಿಗಳಿಗೆ ಪ್ರಶ್ನಿಸಿದರು.

ರೆಹೆಮಾನಸಾಬ್ ಮಕ್ಕಪ್ಪನವರ್, ಬಸವರಾಜ ಉಳ್ಳಾಗಡ್ಡಿ, ನಾರಾಯಣಪ್ಪ ಹರಪನ್ಹಳ್ಳಿ, ಖಾಸಿಂಸಾಬ್ ತಳಕಲ್, ಸಂಗಮೇಶ ಗುತ್ತಿ, ಸಿದ್ದಯ್ಯ ಕಳ್ಳಿಮಠ, ಮಂಜುನಾಥ ಕಡೇಮನಿ, ಮಲ್ಲಿಕಾರ್ಜುನ ಬಿನ್ನಾಳ ಹಾಗೂ ಗಗನ ನೋಟಗಾರ ಇದ್ದರು.

‘ಹಲವು ವರ್ಷಗಳ ಹಿಂದೆಯೇ ಆಸ್ಪತ್ರೆ ಮೇಲ್ದರ್ಜೆಗೆ’

ಯಲಬುರ್ಗಾ: ‘ನಾನು ಶಾಸಕನಾಗಿದ್ದಾಗ ಮೂವತ್ತು ಹಾಸಿಗೆ ಸೌಲಭ್ಯದ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕೆಲಸ ಆಗಿತ್ತು. ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉದ್ಘಾಟಿಸಿದ್ದರು. ಈಗಿನ ಶಾಸಕರು ಅದನ್ನು ಮರೆತಿದ್ದಾರೆ’ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

‘ 2007ರಲ್ಲಿಯೇ ಜಿಒ ಆಗಿದೆ. ಯಲಬುರ್ಗಾದ ಜತೆಗೆ ಇನ್ನಿತರ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ವಾಸ್ತವ ಸಂಗತಿ ಮರೆಮಾಚಿ ಹೆಸರಿಗೆ ಮಾತ್ರ ನೂರು ಹಾಸಿಗೆ ಇನ್ನೂ 30 ಹಾಸಿಗೆ ಆಸ್ಪತ್ರೆಯಾಗಿಯೇ ಉಳಿದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಹಾಲಪ್ಪ ಅವರು ತಪ್ಪು ಮಾಹಿತಿ ನೀಡಿದ್ದು ಸರಿಯಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ಹೇಳಿದರು.

‘ನಾನು ಶಾಸಕ ಹಾಗೂ ಸಚಿವನಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅನೇಕ ಕಟ್ಟಡಗಳು ಉದ್ಘಾಟನೆಗೆ ಕಾಯುತ್ತಿವೆ. ಶಾಸಕರು ಅವುಗಳನ್ನು ಉದ್ಘಾಟಿಸಲು ಆಸಕ್ತಿ ತೋರದೇ ಜನರಲ್ಲಿ ತಪ್ಪು ಮಾಹಿತಿ ಬಿತ್ತುತ್ತಿರುವುದನ್ನು ಗಮನಿಸಿದರೆ ಅವರಲ್ಲಿ ಅನುಭವದ ಕೊರತೆ ಎದ್ದುಕಾಣುತ್ತದೆ’ ಎಂದು ಟೀಕಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡರಾದ ಬಿ.ಎಂ.ಶಿರೂರು, ಅಶೋಕ ತೋಟದ, ಆನಂದ ಉಳ್ಳಾಗಡ್ಡಿ, ಬಸವರಾಜ ಪೂಜಾರ, ಬಸವರಾಜ, ಡಾ.ಶಿವನಗೌಡ ದಾನರೆಡ್ಡಿ, ವೀರಣ್ಣ, ಸುಧೀರ, ಶರಣಪ್ಪ ಗಾಂಜಿ ಹಾಗೂ ಮಲ್ಲಿಕಾರ್ಜುನ ಇದ್ದರು.

‘ಲೋಕಾಯುಕ್ತರಿಗೆ ದೂರು’

ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ನಡೆದ ಕಾಮಗಾರಿಗಳಲ್ಲಿ ಭಾರಿ ಅಕ್ರಮವಾಗಿರುವ ಕುರಿತು ದೂರುಗಳಿವೆ. ಅನೇಕ ಕಡೆ ಕೆಲಸ ಮಾಡದೇ ಹಣ ಎತ್ತುವಳಿ ಮಾಡಿದ ಕುರಿತು ಮಾಹಿತಿ ಲಭ್ಯವಾಗಿದೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ವಿದ್ಯುತ್ ದೀಪಗಳನ್ನು ಉರಿಸದೆ ಕಾಯಂ ಆಗಿ ಬಂದ್ ಮಾಡಿರುವ ಮುಖ್ಯಾಧಿಕಾರಿ ಹಾಗೂ ವಿವಿಧ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯಿಂದ ದೇಶದಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಎರಡನೇ ಅಲೆ ಕುರಿತು ಆರೋಗ್ಯ ಇಲಾಖೆ ಮಾಹಿತಿ ನೀಡಿದರೂ ಎಚ್ಚೆತ್ತುಕೊಳ್ಳದೇ ಉದಾಸೀನ ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ತಿಳಿದಾಗ ಬಂದು ಹೋದರೆ ಸಾಲದು ಜಿಲ್ಲೆಯಲ್ಲಿದ್ದುಕೊಂಡು ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು. ಅತ್ತಿತ್ತ ತಿರುಗಾಡುವುದರಿಂದ ಸೋಂಕು ಹರಡುವಿಕೆ ಹೆಚ್ಚಾಗುತ್ತದೆಯೇ ಹೊರೆತು ಕಡಿಮೆಯಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.