ಪ್ರಾತಿನಿಧಿಕ ಚಿತ್ರ
ಕೊಪ್ಪಳ: ನಗರದ ಹೃದಯ ಭಾಗದಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರ ಎಲ್.ಸಿ. 63ರ ರೈಲ್ವೆ ಗೇಟ್ ಕೆಳಸೇತುವೆ ಕಾಮಗಾರಿ ಪೂರ್ಣಗೊಳಿಸಲು ಮಾಡುತ್ತಿರುವ ವಿಳಂಬ ಖಂಡಿಸಿ ಹೋರಾಟ ಸಮಿತಿಯು ಸೆ. 25ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
‘2017ರಲ್ಲಿ ರೈಲ್ವೆ ಇಲಾಖೆಯಿಂದ ಯೋಜನೆ ಮಂಜೂರಾಗಿತ್ತು. 2024ರಲ್ಲಿ ಸುಮಾರು ಎಂಟು ತಾಸು ರೈಲುಗಳ ಸಂಚಾರ ಸ್ಥಗಿತಗೊಳಿಸಿ ಕಾಂಕ್ರಿಟ್ ಬಾಕ್ಸ್‌ಗಳನ್ನು ಅಳವಡಿಸಿದ್ದು ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳು ಪೂರ್ಣಗೊಂಡಿವೆ. ಗೇಟ್‌ನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಜನ ಮತ್ತು ವಾಹನಗಳ ಸಂಚಾರಕ್ಕೆ ಅಗತ್ಯವಾದ ರಸ್ತೆ, ಚರಂಡಿ ನಿರ್ಮಾಣಕ್ಕೆ ಅಗತ್ಯವಾದ ಕಾಮಗಾರಿಗೆ ಭೂಮಿ ಬಿಟ್ಟುಕೊಟ್ಟವರಿಗೆ ಭೂ ಪರಿಹಾರ ಬರಬೇಕಿದೆ’ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಭೂ ಪರಿಹಾರದ ಹಣ ನೀಡುವಂತೆ ಹಿಂದಿನಿಂದಲೂ ಅನೇಕ ಬಾರಿ ಹೋರಾಟಗಳನ್ನು ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಭಾಗ್ಯನಗರಕ್ಕೆ ಹೊಂದಿಕೊಂಡಿರುವ ಕಲ್ಯಾಣನಗರ, ಚನ್ನಬಸವನಗರ, ಮಹಾಲಕ್ಷ್ಮಿ ಬಡಾವಣೆ, ಗಣೇಶ ನಗರ, ವಿಜಯನಗರ ಸೇರಿದಂತೆ ಅನೇಕರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ’ ಎಂದರು. ಆದ್ದರಿಂದ ಸೆ. 25ರಂದು ಶಾಸಕರು ಹಾಗೂ ಸಂಸದರ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಹೇಳಿದರು.
ಸಮಿತಿಯ ಕಾರ್ಯದರ್ಶಿ ಬಸವರಾಜ ಶೀಲವಂತರ, ಉಪಾಧ್ಯಕ್ಷ ಎಸ್.ಜಿ. ಹೊಸಭಾವಿ, ಪ್ರಮುಖರಾದ ದುರುಗೇಶಪ್ಪ, ಗೀತಾ ಪಾಟೀಲ, ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ರೋಷನ್ ಅಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.