ADVERTISEMENT

ಮಳೆ ಬಂದರೆ ಕೆರೆಯಂತಾಗುವ ಕವಲೂರು

ರಸ್ತೆ, ಚರಂಡಿ ಸೇರಿ ಮೂಲಸೌಕರ್ಯಗಳಿಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 21:37 IST
Last Updated 14 ಅಕ್ಟೋಬರ್ 2019, 21:37 IST
ಕವಲೂರ ಗ್ರಾಮದಲ್ಲಿ ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ತೆ ಇಲ್ಲದೇ ಇರುವುದರಿಂದ ಜನಸಂಚಾರಕ್ಕೆ ಅಡ್ಡಿಯಾಗಿದೆ.
ಕವಲೂರ ಗ್ರಾಮದಲ್ಲಿ ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ತೆ ಇಲ್ಲದೇ ಇರುವುದರಿಂದ ಜನಸಂಚಾರಕ್ಕೆ ಅಡ್ಡಿಯಾಗಿದೆ.   

ಅಳವಂಡಿ: ಮಳೆ ಬಂದರೆ ಸಾಕು ತಾಲ್ಲೂಕಿನ ಕವಲೂರು ಗ್ರಾಮ ಕೆರೆಯಂತೆ ಭಾಸವಾಗುತ್ತದೆ. ಇದರಿಂದಾಗಿ ಗ್ರಾಮಸ್ಥರು ತಿಂಗಳಾನುಟ್ಟಲೆ ತೊಂದರೆ ಅನುಭವಿಸುವಂತೆ ಆಗಿದೆ.

ಎರೆ ಮಣ್ಣಿನಿಂದ ಕೂಡಿದ ಗ್ರಾಮದಲ್ಲಿಉತ್ತಮ ರಸ್ತೆಯನ್ನೇ ನಿರ್ಮಿಸಿಲ್ಲ. ಮಳೆ ಬಂದರೆ ನೀರು ರಸ್ತೆ ಮೇಲೆಯೇ ನೀರು ನಿಂತುಕೊಳ್ಳುತ್ತದೆ. ಇದರಿಂದಾಗಿ ಗುಂಡಿ ಬಿದ್ದಿದ್ದು, ಗ್ರಾಮಸ್ಥರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅಲ್ಲದೇ ಮನೆಯ ಅಂಗಳದಲ್ಲಿ ನೀರು ನಿಲ್ಲುವುದರಿಂದ ಗಲೀಜು ನೀರಿನಲ್ಲಿಯೇ ಮಕ್ಕಳು ಆಟವಾಡುತ್ತವೆ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಈ ಮೂಲಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

ನಿರಂತರವಾಗಿ ಕಳೆದ ಎರಡು–ಮೂರು ವಾರಗಳಿಂದ ಜಿಟಿ, ಜಿಟಿ ಸುರಿದ ಮಳೆಯಿಂದಾಗಿ ಕವಲೂರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳು ಕುಸಿದಿದ್ದು, ಇದರಿಂದಾಗಿ ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕವಲೂರ ಗ್ರಾಮದ ಮಹೇಶ ಭಾವಿಕಟ್ಟಿ, ನಾಗರಾಜ ಬಿಕನಳ್ಳಿ, ಮಲ್ಲಪ್ಪ ನೆಲಗೇರಿ ಸೇರಿ ಒಟ್ಟು ಹತ್ತರಿಂದ-ಹದಿನೈದು ಜನರ ಮನೆಗಳು ಕುಸಿದು ಬೀಳುವ ಹಂತದಲ್ಲಿವೆ.

ADVERTISEMENT

ಗ್ರಾಮದ ಬಸ್‌ನಿಲ್ದಾಣದ ಹಿಂದುಗಡೆಯಿರುವ ಕೆರೆಯು ಪೂರ್ಣವಾಗಿ ತುಂಬಿಕೊಂಡಿದ್ದು, ಮತ್ತೆ ಮಳೆ ಸುರಿದರೆ ಕೆರೆಯಲ್ಲಿನ ನೀರು ಗ್ರಾಮದೊಳಗಡೆ ಪ್ರವೇಶಿಸುವ ಸಾಧ್ಯತೆಯಿದೆ. ಮಳೆಯಿಂದಾಗಿ ಗ್ರಾಮದಲ್ಲಿನ ಚರಂಡಿಗಳೆಲ್ಲ ತುಂಬಿ, ರಸ್ತೆಯ ಮೇಲೆ ಹರಿಯುತ್ತಿವೆ. ಅಂಗನವಾಡಿ ಕೇಂದ್ರದ ಮುಂದಿನ ಅಂಗಳದಲ್ಲಿ ಮಳೆ ನೀರಿನ ಜೊತೆಗೆ ಚರಂಡಿ ನೀರು ಸೇರಿಕೊಂಡಿದ್ದು, ಕೊಳಚೆ ಪ್ರದೇಶದಂತಾಗಿದೆ.

ಗ್ರಾಮದ ಏಳನೇ ವಾರ್ಡ್‌ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಚರಂಡಿಗಳು ಸಂಪೂರ್ಣ ಹದಗಟ್ಟಿವೆ. ಪರಿಶಿಷ್ಟ ಜಾತಿಯ ಕಾಲೊನಿಯಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಿಸಿಲ್ಲ. ಈ ಮೂಲಕ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದಾಗಿ ಕವಲೂರು ಹಲವು ಸಮಸ್ಯೆಗಳ ಗೂಡಾಗಿದೆ. ಹಾಗಾಗಿ ಸರಿಯಾದ ರಸ್ತೆ ಮತ್ತು ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎನ್ನುತ್ತಾರೆ ಗ್ರಾಮದ ಮಹೇಶ.

ಹಿರೇಹಳ್ಳ ಸೇರಿಕೊಳ್ಳುವ ಲಂಡಕೇನ್ ಹಳ್ಳ ಮತ್ತು ಸಜ್ಜೆ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಕೆಳಭಾಗದಲ್ಲಿ ಮುಳ್ಳುಕಂಟೆಗಳು ಹಾಗೂ ನೀರಿನೊಂದಿಗೆ ಹರಿದುಬಂದ ಘನತ್ಯಾಜ್ಯ ವಸ್ತುಗಳು ಸಿಕ್ಕು ಹಾಕಿಕೊಂಡಿದ್ದು, ಹಳ್ಳದ ನೀರು ಸರಾಗವಾಗಿ ಹರಿಯುತ್ತಿಲ್ಲ. ಕವಲೂರು ಗ್ರಾಮ ಪಂಚಾಯಿತಿ ಹೊಂದಿದ್ದು, ಇಲ್ಲಿನ ಸಮಸ್ಯೆಗಳ ಬಗೆಗೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗದ ಅನಿವಾರ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.