ADVERTISEMENT

ಕೊಪ್ಪಳ ಜಿಲ್ಲೆಯಾದ್ಯಂತ ಮಳೆ; ಕೊಚ್ಚಿಹೋದ ಮೆಕ್ಕೆ ಜೋಳ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 15:12 IST
Last Updated 6 ಅಕ್ಟೋಬರ್ 2022, 15:12 IST
ಕೊಪ್ಪಳ ಜಿಲ್ಲೆಯಾದ್ಯಂತ ಮಳೆ
ಕೊಪ್ಪಳ ಜಿಲ್ಲೆಯಾದ್ಯಂತ ಮಳೆ   

ಕೊಪ್ಪಳ: ಮೂರ್ನಾಲ್ಕು ದಿನ ಮೇಲಿಂದ ಮೇಲೆ ಸುರಿದಿದ್ದ ಮಳೆ ಎರಡು ದಿನ ಬಿಡುವು ನೀಡಿತ್ತು. ಗುರುವಾರ ಮತ್ತೆ ಮಳೆ ಸುರಿದಿದ್ದು ಜನರಲ್ಲಿ ಆತಂಕದ ಕಾರ್ಮೋಡ ಮನೆ ಮಾಡಿದೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಸುರಿದಿದ್ದು, ಕುಕನೂರಿನ ಎಪಿಎಂಸಿಯಲ್ಲಿ ಒಣಗಲು ಹಾಕಿದ್ದ 140 ಕ್ವಿಂಟಲ್‌ ಮೆಕ್ಕೆ ಜೋಳ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು. ಸಂಜೆ ಸಿಡಿಲಿನ ಆರ್ಭಟದೊಂದಿಗೆ ಜೋರು ಮಳೆ ಬಂತು. ಕುಕನೂರು, ಕಾರಟಗಿ, ಯಲಬುರ್ಗಾ, ಮುನಿರಾಬಾದ್‌, ಕೊಪ್ಪಳ, ಅಳವಂಡಿಯಲ್ಲಿ ಉತ್ತಮ ಮಳೆಯಾಗಿದೆ.

ADVERTISEMENT

ಜಿಲ್ಲೆಯ ಬಹಳಷ್ಟು ಕಡೆ ಮೆಕ್ಕೆ ಜೋಳ ಮಾರಾಟ ಮಾಡಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ವಾರ ಸುರಿದ ಜೋರು ಮಳೆಯಿಂದಾಗಿ ಬೆಳೆ ಅತಿಯಾಗಿ ತೇವಗೊಂಡಿತ್ತು. ರೈತರು ಅದನ್ನು ಎಪಿಎಂಸಿಗಳಲ್ಲಿ ಹಾಗೂ ಹೆದ್ದಾರಿಯ ಪಕ್ಕದಲ್ಲಿ ಒಣಗಲು ಹಾಕಿದ್ದರು. ಈಗ ಮತ್ತೆ ಮಳೆ ಬಂದಿದ್ದು, ಬೆಳೆ ಸಂಪೂರ್ಣವಾಗಿ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.

ನಿರಂತರ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮಣ್ಣಿನ ಮನೆಗಳು ನೆಂದು ಹೋಗಿವೆ. ಹೀಗೆ ನೆಂದು ಹೋಗಿದ್ದ ಮನೆಯೊಂದು ಬುಧವಾರ ದಿಢೀರ್ ಕುಸಿದು ಬಿದ್ದ ತಾಲ್ಲೂಕಿನ ಮುತ್ತೂರಿನಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಆದ್ದರಿಂದ ಮಣ್ಣಿನ ಮನೆಗಳಲ್ಲಿ ವಾಸವಿರುವ ಜನ ಆತಂಕದಿಂದಲೇ ದಿನಗಳನ್ನು ದೂಡುವಂತಾಗಿದೆ.

ರಸ್ತೆ ಅವ್ಯವಸ್ಥೆ: ಜಿಲ್ಲಾ ಕೇಂದ್ರವಾದರೂ ನಗರದ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಹೀಗಾಗಿ ಮಳೆಬಂದಾಗ ದ್ವಿಚಕ್ರ ವಾಹನಗಳ ಸವಾರರು ಪರದಾಡುವುದು ಸಾಮಾನ್ಯ. ಹಳೇ ಡಿ.ಸಿ. ಕಚೇರಿಯಿಂದ ಪ್ರಶಾಂತ ಕಾಲೊನಿಗೆ ಹೋಗುವ ಮಾರ್ಗ, ಅಶೋಕ ವೃತ್ತದಿಂದ ಕಿನ್ನಾಳಕ್ಕೆ ಹೋಗುವ ಮಾರ್ಗದ (ಐಬಿ ಬಳಿ) ರಸ್ತೆ ಸಾಕಷ್ಟು ಗುಂಡಿಗಳು ಬಿದ್ದಿವೆ. ಈ ರಸ್ತೆಗಳಲ್ಲಿ ಸವಾರರು ಪ್ರಯಾಸದಿಂದಲೇ ಹೋಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.