ಕಾರಟಗಿ: ಮುಂಗಾರಿನಲ್ಲಿ ಭತ್ತ ನಾಟಿ ಮಾಡಿದ್ದ ಅಕಾಲಿಕ ಮಳೆಯಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ನಾಟಿಯಿಂದ ಆರಂಭಿಸಿ ಕಟಾವು, ಮಾರಾಟ ಮಾಡುವವರೆಗೆ ನಿರಂತರವಾಗಿ ಸಂಕಷ್ಟಗಳನ್ನು ಎದುರಿಸುವಂತಾಗಿದೆ.
ನಾಟಿಯ ಬಳಿಕ ಸುರಿದ ಗಾಳಿ–ಮಳೆಗೆ ಭತ್ತ ನೆಲಕ್ಕೊರಗಿ ಹಾನಿಯಾಗಿತ್ತು. ಇನ್ನೇನು ಕಟಾವು ಮಾಡಿ, ಒಣಗಿಸಿ, ಮಾರಾಟ ಮಾಡಬೇಕೆಂದರೆ ಫೆಂಜಲ್ ಚಂಡಮಾರುತದಿಂದಾಗಿ ಸುರಿಯುತ್ತಿರುವ ಮಳೆಗೆ ರೈತರು ತತ್ತರಿಸುವಂತಾಗಿದೆ. ಮಳೆಯಿಂದಾಗಿ ಭತ್ತ ಒಣಗಿಸುವ ಸಂರಕ್ಷಿಸಿಕೊಳ್ಳುವುದೇ ಸಮಸ್ಯೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಕೆಲ ದಿನಗಳಂದಿ ದಿನಪೂರ್ತಿ ಮೋಡ ಕವಿಯುವುದು, ತುಂತುರು ಮಳೆಯಿಂದಾಗಿ ಭತ್ತವನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡಬೇಕಾಯಿತು. ಮಧ್ಯಾಹ್ನ ಅಧಿಕ ಮಳೆ ಸುರಿದಿದ್ದರಿಂದ ಒಣಗಿಸಲು ಹಾಕಿದ್ದ ರೈತರು ಹೆಣಗಾಡಬೇಕಾಯಿತು.
ಕಟಾವು ಯಂತ್ರದ ಸಮಸ್ಯೆ: ಕಟಾವು ಯಂತ್ರದ ದರ ಗಂಟೆಗೆ ₹3 ಸಾವಿರ ಇತ್ತು. ಆದರೆ ರೈತರಿಗೆ ಸಕಾಲಕ್ಕೆ ಕಟಾವು ಯಂತ್ರಗಳು ಸಿಗುತ್ತಿಲ್ಲ. ಒಂದೆರಡು ಎಕರೆಯುಳ್ಳ ರೈತರು ಅಧಿಕ ಜಮೀನಿರುವ ದೊಡ್ಡ ರೈತರ ಕಟಾವು ಸಮಯ ಕಾದು ಕಟಾವು ಮಾಡಿಸಬೇಕಿದೆ. ಬೆಳೆ ಗಾಳಿ, ಮಳೆಗೆ ಬೆಳೆ ನೆಲಕ್ಕೊರಗಿದ್ದು, 1 ಎಕರೆಗೆ ಒಂದು ತಾಸು ಬದಲು 3 ತಾಸು ಆಗುತ್ತಿದೆ. ಮಲಗಿದ್ದ ಭತ್ತವನ್ನು ಎತ್ತಿ ಕಟಾವು ಮಾಡುವ ಸಮಯದಲ್ಲಿ ಭತ್ತದ ಅಲ್ಪ ಪ್ರಮಾಣವು ನೆಲದ ಪಾಲಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡರು.
ಕಟಾವಿನ ಬಳಿಕ ಭತ್ತವನ್ನು ಮಾರಾಟ ಮಾಡೋಣವೆಂದರೆ ಬಿಟ್ಟೂ ಬಿಡದೇ ಮೋಡ ಕವಿಯುವುದು, ಹನಿ ಬೀಳುವುದು, ಒಣಗಾಕಿರುವ ಭತ್ತ ಹಸಿಯಾಗಿ ಆತಂಕ ಹೆಚ್ಚಿಸಿದೆ. ಭತ್ತವನ್ನು ಮೇಲೆ, ಕೆಳಗೆ ಮಾಡಿ ಒಣಗಿಸುವುದು ನಿರಂತರವಾಗಿದ್ದರೂ ಭತ್ತ ಮಾತ್ರ ಸಂಪೂರ್ಣವಾಗಿ ಒಣಗುತ್ತಿಲ್ಲ. ಇದರಿಂದಾಗಿ ಹಸಿ ಭತ್ತ ಖರೀದಿಗೆ ವರ್ತಕರು ಮುಂದಾಗುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
‘ಪ್ಲಾಟ್‌ನಲ್ಲೇ ಒಣಗಿಸಿದ್ದೇವೆ. ಪೂರ್ತಿಯಾಗಿ ಒಣಗುತ್ತಿಲ್ಲ. ದರ ನಿಗದಿಪಡಿಸಿ ಖರೀದಿ ಮಾಡಿರಿ’ ಎಂದು ಗ್ರಾಮೀಣ ಭಾಗದ ರೈತರೊಬ್ಬರು ರೈಸ್‌ಮಿಲ್ ಮಾಲೀಕರ ಬಳಿ ಕೇಳುತ್ತಿರುವ ಪ್ರಸಂಗ ಜರುಗಿತು. ಇದು ಒಬ್ಬರದಲ್ಲ ಬಹುತೇಕ ರೈತರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮಾರಾಟದ ಸಂದರ್ಭದಲ್ಲೂ ಅನೇಕ ಸಂಕಷ್ಟಗಳು ಎದುರಾಗಿವೆ. ಈ ಭಾಗದಲ್ಲಿ ಕಟಾವು ಯಂತ್ರದ ಸದ್ದು, ರಾಶಿ, ಒಣಗಿಸುವುದು, ತುಂಬುವುದು, ಮಾರಾಟ ಮಾಡುವ ಪ್ರಕ್ರಿಯೆಯ ಬದಲು ಸಮಸ್ಯೆಗಳ ಸರಮಾಲೆಯೇ ರೈತರಿಗೆ ಎದುರಾಗಿದೆ.
ಕೊಳವೆ ರೋಗ, ಹವಾಮಾನ ವೈಪರಿತ್ಯದಿಂದ ಭತ್ತದ ಇಳುವರಿ ಎಕರೆಗೆ 15 ರಿಂದ 20 ಚೀಲಗಳಷ್ಟು ಕುಸಿದಿದೆ. ಕಳೆದ ಬಾರಿ 75 ಕೆಜಿ ಚೀಲಕ್ಕೆ ₹ 2 ಸಾವಿರಕ್ಕೂ ಅಧಿಕ ದರ ಇತ್ತು. ಈಗ ₹ 1600 ದಾಟುತ್ತಿಲ್ಲ. ಒಂದೆಡೆ ಇಳುವರಿ ಕಡಿಮೆ ಮತ್ತೊಂದೆಡೆ ದರ ಕಡಿಮೆ. ಇದೆಲ್ಲದರ ಮಧ್ಯೆ ಫೆಂಜಲ್ ಚಂಡಮಾರುತ ರೈತರನ್ನು ನಲಗುವಂತೆ ಮಾಡಿದೆ. ರೈತರಿಗೆ ಪರಿಹಾರದ ಮಾರ್ಗಗಳೇ ಇಲ್ಲದಾಗಿದ್ದು, ಚಿಂತಾಕ್ರಾಂತರಾಗಿದ್ದಾರೆ.
ಭತ್ತ ಕಟಾವು ಮಾಡಿದ್ದು ಎಪಿಎಂಸಿ ಆವರಣದಲ್ಲಿ ಒಣಗಿಸಲು ಹಾಕಿದ್ದೇವೆ. ವಾತಾವರಣ ನಮ್ಮನ್ನು ಹೈರಾಣಾಗಿಸಿದೆ. ಇಳುವರಿಯೂ ಕಡಿಮೆಯಾಗಿದ್ದು ವರ್ತಕರೂ ಖರೀದಿಗೆ ಮುಂದಾಗುತ್ತಿಲ್ಲ.–ಹುಚ್ಚಪ್ಪ ಕುರಿ, ರೈತ ಕಾರಟಗಿ
ಕಟಾವು ಯಂತ್ರಗಳಿಗೆ ನಿಗದಿಯಾದ ದರ ನೀಡಲು ಸಿದ್ಧರಿದ್ದರೂ ಯಂತ್ರಗಳು ಸಕಾಲಕ್ಕೆ ಸಿಗುತ್ತಿಲ್ಲ. ಇಳುವರಿ ದರ ಕಡಿಮೆಯಾದ ಚಿಂತೆಯಲ್ಲಿದ್ದೇವೆ. ಆಗಾಗ ಸುರಿಯುವ ಜಿಟಿ–ಜಿಟಿ ಮಳೆ ನಮ್ಮ ಬಾಳನ್ನು ಇನ್ನಷ್ಟು ಬರಡಾಗಿಸುತ್ತಿದೆ.–ವೆಂಕಟೇಶ ಕಟ್ಟೀಮನಿ, ರೈತ ಕಾರಟಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.