
ಕೊಪ್ಪಳ: ‘ಗಂಗಾವತಿ ತಾಲ್ಲೂಕಿನ ಸಾಣಾಪೂರ ಬಳಿ ಕಳೆದ ವರ್ಷ ನಡೆದ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ವ್ಯಕ್ತಿಯೋರ್ವನ ಕೊಲೆ ಪ್ರಕರಣ ಸಣ್ಣ ಘಟನೆ ಎಂದಿರುವ ಸಂಸದ ರಾಜಶೇಖರ ಹಿಟ್ನಾಳ್ ಹೇಳಿಕೆ ಖಂಡನಾರ್ಹ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಾಂವಿಧಾನಿಕ ಹುದ್ದೆಯಲ್ಲಿರುವ ಸಂಸದ ಹಿಟ್ನಾಳ ಅವರಿಗೆ ಇಂತಹ ಹೇಳಿಕೆ ಶೋಭೆ ತರುವಂತಹದ್ದಲ್ಲ. ಪ್ರವಾಸೋದ್ಯಮ ಉತ್ತೇಜನ ನೀಡುವ ಭಾಗವಾಗಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಆಯೋಜಿಸಿದ್ದ ಕೊಪ್ಪಳ ಅನ್ವೇಷಿಸಿ ಎನ್ನುವ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಕಡೆಯಿಂದ ಬಂದಿದ್ದ ಬ್ಲಾಗರ್ಸ್, ಪ್ರವಾಸಿ ಮಿತ್ರರ ಎದುರು ಹಿಟ್ನಾಳ ಅವರು ಇಂಥ ಅಸಂಬದ್ಧ ಹೇಳಿಕೆ ನೀಡಿ ಜಿಲ್ಲೆಯ ಮರ್ಯಾದೆ ತೆಗೆದಿದ್ದಾರೆ. ಆನೆಗೊಂದಿ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯಲು ಆಡಳಿತ ಪಕ್ಷದಲ್ಲಿರುವ ಜನಪ್ರತಿನಿಧಿಗಳ ಹಿಂದೆ ಇರುವ ಹಲವು ಬೆಂಬಿಲಗರೇ ಕಾರಣ’ ಎಂದು ಅವರು ಆರೋಪಿಸಿದ್ದಾರೆ.
‘ಡ್ರಗ್ಸ್, ಮಟ್ಕಾ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ನಿರಾತಂಕವಾಗಿ ನಡೆಯಲು ಬಿಟ್ಟಿರುವುದೇ ಇಂತಹ ಘಟನೆ ಜರುಗಲು ಕಾರಣ ಎಂಬುದು ಜಗಜ್ಜಾಹೀರು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ, ಪೊಲೀಸಿಂಗ್ ಬೀಟ್ ವ್ಯವಸ್ಥೆ ಜಾಸ್ತಿ ಮಾಡಿಸಿ, ಬರುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಒದಗಿಸಿದರೆ ಹೆಚ್ಚಿನ ಮಟ್ಟದಲ್ಲಿ ದೇಶವಲ್ಲದೇ ವಿದೇಶಿ ಪ್ರವಾಸಿಗರು ನಮ್ಮ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಲು ಬರುತ್ತಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.