ADVERTISEMENT

ಕೊಪ್ಪಳ | ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು

ಮೂರು ಮಕ್ಕಳ ತಂದೆಯಿಂದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 4:55 IST
Last Updated 29 ಆಗಸ್ಟ್ 2024, 4:55 IST

ಕೊಪ್ಪಳ: ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ ವ್ಯಕ್ತಿಯೊಬ್ಬ 2019ರಲ್ಲಿ ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ನಡೆಸಿದ್ದ ಅತ್ಯಾಚಾರ ಸಾಬೀತಾಗಿದ್ದು ಕೊಪ್ಪಳದ ಫೋಕ್ಸೊ ನ್ಯಾಯಾಲಯವು ಅಪರಾಧಿಗೆ 20 ವರ್ಷ ಜೈಲು ಹಾಗೂ ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ತುಗ್ಗಲದೋಣಿ ಬ್ರಿಡ್ಜ್ ಹತ್ತಿರ 2019ರ ಡಿಸೆಂಬರ್‌ನಲ್ಲಿ ಭೀಮಪ್ಪ ಶಾಂತಗೇರಿ ಎಂಬಾತ ಬಾಲಕಿಯನ್ನು ಕರೆಸಿಕೊಂಡು ಟಂಟಂ ವಾಹನದಲ್ಲಿ ಅಪಹರಿಸಿಕೊಂಡು ಬಾದಾಮಿ ರೈಲು ನಿಲ್ದಾಣಕ್ಕೆ ತೆರಳಿದ್ದ. ಬಳಿಕ ಸೊಲ್ಲಾಪುರ, ಸಿಕಂದರಾಬಾದ್‌ಗೆ ಹೋಗಿ ಅಲ್ಲಿ ಅತ್ಯಾಚಾರ ಮಾಡಿದ್ದ. ಇದಷ್ಟೇ ಅಲ್ಲದೆ ಈ ಹಿಂದೆ ಕೂಡ ಸವಡಿ ಗ್ರಾಮದ ಸೀಮಾದ ಜಮೀನಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಹಿನ್ನೆಲೆಯಲ್ಲಿ ಹನುಮಸಾಗರ ಆಗಿನ ಪಿಎಸ್‌ಐ ಅಮರೇಶ ಹುಬ್ಬಳ್ಳಿ ಈ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಶಿಕ್ಷೆ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಕುಷ್ಟಗಿ ತಾಲ್ಲೂಕಿನ ತೋಪಾಲಕಟ್ಟಿ ಸೀಮಾದ ಫಕೀರಗೌಡ ಎಂಬ ವ್ಯಕ್ತಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳದ ಫೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ಅಪರಾಧಿಗೆ 20 ವರ್ಷ ಜೈಲು ಹಾಗೂ ₹20 ಸಾವಿದ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ADVERTISEMENT

ಫಕೀರಗೌಡ ಕುರಿ ಮೇಯಿಸಲು ಹೋದಾಗ ಜಮೀನಿನಲ್ಲಿ ವಾಸವಾಗಿದ್ದ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿದ್ದ. ಬಳಿಕ ನೀರು ಕುಡಿಯಲು ಆಕೆಯ ಮನೆಗೆ ಹೋದಾಗ ಅಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಅತ್ಯಾಚಾರ ಎಸಗಿದ್ದ. ಈ ಕುರಿತು ಆಗಿನ ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್‌ಐ ಮೌನೇಶ ರಾಠೋಡ ಪ್ರಕರಣ ದಾಖಲಿಸಿದ್ದು. ಕುಷ್ಟಗಿ ಗ್ರಾಮೀಣ ವೃತ್ತದ ಸಿಪಿಐ ನಿಂಗಪ್ಪ ಎನ್.ಆರ್ ಮತ್ತು ಯಶವಂತ ಬಿಸನಳ್ಳಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಈ ಎರಡೂ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ (ಪೋಕ್ಸೊ) ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.