ADVERTISEMENT

ಹಿರಿಯ ನಾಗರಿಕರು ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸಿ: ಡಿಸಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 15:57 IST
Last Updated 1 ಅಕ್ಟೋಬರ್ 2022, 15:57 IST
ಕೊಪ್ಪಳದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕದ ದಿನದ ಕಾರ್ಯಕ್ರಮದಲ್ಲಿ ಶನಿವಾರ ಹಿರಿಯರನ್ನು ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು
ಕೊಪ್ಪಳದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕದ ದಿನದ ಕಾರ್ಯಕ್ರಮದಲ್ಲಿ ಶನಿವಾರ ಹಿರಿಯರನ್ನು ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು   

ಕೊಪ್ಪಳ: ‘ಹಿರಿಯ ನಾಗರಿಕರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರನ್ನು ಗೌರವಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಯುವಜನತೆಗೆ ಕರೆ ನೀಡಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹಿರಿಯ ನಾಗರಿಕರು ಸಮಾಜಕ್ಕೆ ನೀಡಿದ ಕೊಡುಗೆ ಮಹತ್ವದಾಗಿದೆ. ಅವರು ಸಮಾಜದಲ್ಲಿ ಬದುಕು ನಿರ್ಮಾಣ ಮಾಡಿಕೊಂಡು, ಬಾಳಿದ ಜೀವನದ ಅನುಭವಗಳನ್ನು ನಾವು ಸ್ಮರಿಸಬೇಕು. ಹಿರಿಯ ನಾಗರಿಕರ ಅನುಭವಗಳನ್ನು ನಾವು ಪಡೆದುಕೊಳ್ಳಬೇಕು ಹಾಗೂ ವಿಶೇಷವಾಗಿ ಇಂದಿನ ಯುವಜನತೆ ಹಿರಿಯರ ಅನುಭವ ಪಡೆದುಕೊಂಡು ಅವರನ್ನು ಗೌರವಿಸಬೇಕು’ ಎಂದರು.

ADVERTISEMENT

ವಕೀಲ ವಿ.ಎಂ. ಭೂಸನೂರಮಠ ಮಾತನಾಡಿ ‘ಸಮಾಜದಲ್ಲಿ ಹಿರಿಯ ನಾಗರಿಕರು ಇಳಿವಯಸ್ಸಿನಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂವಿಧಾನವು ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಅವರ ಮೂಪ್ಪಿನ ವಯಸ್ಸಿಗೆ ಕಾಯ್ದೆ ಮತ್ತು ಕಾನೂನುಗಳು ತುಂಬಾ ಸಹಕಾರಿಯಾಗಲಿವೆ. ಇಳಿವಯಸ್ಸಿನಲ್ಲಿ ಮಕ್ಕಳಿಂದ ದೈಹಿಕ ಮತ್ತು ಮಾನಸಿಕ ತೊಂದರೆಗೆ ಒಳಗಾದ ಹಿರಿಯ ನಾಗರಿಕರಿಗೆ ಕಾನೂನು ಸಹಾಯವಾಗಲಿದೆ’ ಎಂದರು.

ಹಿರಿಯ ನಾಗರಿಕರಿಗಾಗಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಗೆಲುವು ಪಡೆದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶ್ರೀದೇವಿ ಎಸ್. ನಿಡಗುಂದಿ, ನಿವೃತ್ತ ನೌಕರ ಶಿಕ್ಷಕರ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿ. ಜೆಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣ ಅಧಿಕಾರಿ ಗಂಗಪ್ಪ, ಹಿರಿಯ ನಾಗರಿಕರ ಸಂಘ-ಸಂಸ್ಥೆಗಳ ಪ್ರತಿನಿಧಿಗಳಾದ ಅಂದಾನಪ್ಪ ಅಂಗಡಿ, ಶರಣಪ್ಪ ಉಪ್ನಾಳ, ನಿಜಲಿಂಗಪ್ಪ ಮೆಣಸಗಿ, ಸುಮಂಗಳ ಹಂಚಿನಾಳ, ಖಾಸೀಂ ಸಾಬ ಕವಲೂರು, ಭೀಮಾ ನಾಯಕ್, ಎಸ್.ಎನ್. ಗೋನಾಳ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.