ADVERTISEMENT

ಕೊಪ್ಪಳ: ಗಣರಾಜ್ಯೋತ್ಸವದಲ್ಲಿ ಪದ್ಮಶ್ರೀ ಭೀಮವ್ವಗೆ ಗೌರವ ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 4:37 IST
Last Updated 26 ಜನವರಿ 2025, 4:37 IST
   

ಕೊಪ್ಪಳ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಧ್ವಜಾರೋಹಣದ ಬಳಿಕ ಪೊಲೀಸ್, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡ ಪ್ರದರ್ಶಿಸಿದ ಪಥ ಸಂಚಲನ ಗಮನ ಸೆಳೆಯಿತು.

ಬಳಿಕ ಮಾತನಾಡಿದ ಸಚಿವರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿಗೆ ಮಾದರಿಯಾಗಿದ್ದು, ಎಷ್ಟೇ ಕಷ್ಟವಾದ ಸವಾಲು ಎದುರಾದರೂ ಎದುರಿಸುವ ಗಟ್ಟಿತನ ಗಳಿಸಿದ್ದೇವೆ ಎಂದರು‌.

ADVERTISEMENT

ರಾಜ್ಯ ಸರ್ಕಾರ ಇಷ್ಟು ದಿನಗಳ ಆಡಳಿತದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸಾಕಷ್ಟು ಸವಲತ್ತುಗಳನ್ನು ಒದಗಿಸಿದೆ. ಮಹಿಳೆಯರು, ಪಡಿತರ ಚೀಟಿ ಹೊಂದಿರುವರು, ಯುವಕರು ಸೇರಿದಂತೆ ರಾಜ್ಯದ ಎಲ್ಲ ವರ್ಗಗಳ ಜನರಿಗೆ ಸುಂದರ ಬದುಕು ಕಟ್ಟಿಕೊಳ್ಳಲು‌ ನೆರವಾಗಿದೆ ಎಂದರು.

ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.