ಕುಕನೂರ: ‘ರಾಜ್ಯದಲ್ಲಿ ಇದೀಗ ಒಳಮೀಸಲಾತಿ ವಿಚಾರ ಚರ್ಚೆಗೆ ಬಂದಿದ್ದು, ರಾಜ್ಯದ ಬಂಜಾರ, ಭೋವಿ, ಕೊರಮ, ಕೊರಚರಿಗೆ ಶೇ 6ರಷ್ಟು ಒಳಮೀಸಲಾತಿ ಕಲ್ಪಿಸಬೇಕು’ ಎಂದು ತಾಲ್ಲೂಕು ಬಂಜಾರ ಸಮಾಜದ ಮುಖಂಡರು ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಕಾನೂನು ಸಚಿವ ಎಚ್.ಕೆ ಪಾಟೀಲ್ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು.
ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮಾತನಾಡಿ, ‘ನಮ್ಮ ಜನಾಂಗದವರು ಅನಕ್ಷರಸ್ಥರು, ಮುಗ್ದರು ಇರುವುದರಿಂದ ಹಾಗೂ ನಮ್ಮ ಹತ್ತಿರ ಸರಿಯಾದ ದಾಖಲೆಗಳು ಇಲ್ಲದೇ ಇರುವುದರಿಂದ ನಮ್ಮ ಜನಾಂಗಗಳ ನೋಂದಣಿ ಸರಿಯಾಗಿರುವುದಿಲ್ಲ. ಈ ಸಮಯದಲ್ಲಿ ಕೆಲವೊಂದಿಷ್ಟು ಜನ ಹೊಟ್ಟೆ ಪಾಡಿಗಾಗಿ ದುಡಿಯಲು ಗುಳೆ ಹೋಗಿರುವುದರಿಂದ ಈ ಜಾತಿ ಜನಗಣತಿಯಿಂದ ಹೊರಗುಳಿದಿದ್ದಾರೆ. ಆದ್ದರಿಂದ ಒಳಮೀಸಲಾತಿಯನ್ನು ಇಲ್ಲಿಗೆ ಬಿಡುವುದು ಸೂಕ್ತ’ ಎಂದರು.
‘ಒಳಮೀಸಲಾತಿಯಲ್ಲಿ ನಮ್ಮ ಈ ನಾಲ್ಕು ಸಮಾಜಗಳಿಗೆ ಶೇ 6 ರಷ್ಟು ಮೀಸಲಾತಿ ನೀಡಿದರೆ ಅನುಕೂಲವಾಗುತ್ತದೆ. ಸಾಮಾಜಿಕ ನ್ಯಾಯದಡಿಯಲ್ಲಿ ನಮಗೆ ಉಪಕಾರ ಮಾಡಿದಂತಾಗುತ್ತದೆ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಗೋರ ಸೇನಾ ಕರ್ನಾಟಕ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಮೇಘರಾಜ್ ಬಳಗೇರಿ, ಯಮನೂರಪ್ಪ ಕಟ್ಟಿಮನಿ, ಪ್ರಕಾಶ ಬಳಿಗೇರಿ, ಹನಮಂತ ಚವಾಣ, ಪ್ರಾಣೇಶ ನಾಯಕ, ರಾಘವೇಂದ್ರ ಬಳಗೇರಿ, ಲಿಂಬಣ್ಣ ನಾಯಕ, ಚೇತನ ಬಳಿಗೇರಿ, ದಿಲೀಪ ಕಾರಭಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.