ADVERTISEMENT

ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 15:33 IST
Last Updated 16 ಆಗಸ್ಟ್ 2024, 15:33 IST
ವಸತಿ ನಿಲಯಗಳ ಬಳಿ ವಿದ್ಯಾರ್ಥಿನಿಯರಿಗೆ ಕಿರಿಕುಳ ನೀಡುತ್ತಿರುವ ಪುಂಡರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಗಂಗಾವತಿಯಲ್ಲಿ ಎಸ್ಎಫ್ಐ ಸಂಘಟನೆ ಸದಸ್ಯರು ಶುಕ್ರವಾರ ಡಿವೈಎಸ್‌ಪಿ ಅವರಿಗೆ ಮನವಿ ನೀಡಿದರು
ವಸತಿ ನಿಲಯಗಳ ಬಳಿ ವಿದ್ಯಾರ್ಥಿನಿಯರಿಗೆ ಕಿರಿಕುಳ ನೀಡುತ್ತಿರುವ ಪುಂಡರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಗಂಗಾವತಿಯಲ್ಲಿ ಎಸ್ಎಫ್ಐ ಸಂಘಟನೆ ಸದಸ್ಯರು ಶುಕ್ರವಾರ ಡಿವೈಎಸ್‌ಪಿ ಅವರಿಗೆ ಮನವಿ ನೀಡಿದರು   

ಗಂಗಾವತಿ: ಇಲ್ಲಿನ ಹೊಸಳ್ಳಿ ರಸ್ತೆಯಲ್ಲಿನ ಬಿಸಿಎಂ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಬಳಿನ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ನಿತ್ಯ ಕಿರುಕುಳ ನೀಡುತ್ತಿರುವ ಪುಂಡರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಸಂಘಟನೆ ಸದಸ್ಯರು ಶುಕ್ರವಾರ ಡಿವೈಎಸ್‌ಪಿ ಸಿ.ದ್ದಲಿಂಗಪ್ಪ ಪೊಲೀಸ್ ಪಾಟೀಲ ಅವರಿಗೆ ಮನವಿ ನೀಡಿದರು.

ಸಂಘಟನೆ ತಾಲ್ಲೂಕು ಅಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ‘ಹೊಸಳ್ಳಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ನಗರದಲ್ಲಿ 4 ಬಾಲಕಿಯರ ವಸತಿ ನಿಲಯಗಳಿದ್ದು, ಇಲ್ಲಿಂದ ನಿತ್ಯ ನೂರಾರು ಸಂಖ್ಯೆಯ ವಿದ್ಯಾರ್ಥಿನಿಯರು ನಗರದ ಹೃದಯಭಾಗ ಮತ್ತು ಹೊರವಲಯದ ಶಾಲಾ-ಕಾಲೇಜುಗಳಿಗೆ ತೆರಳಬೇಕಿದೆ. ಈಚೆಗೆ ಇಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಅವರಿಂದ ವಿದ್ಯಾರ್ಥಿನಿಯರು ನಿತ್ಯ ಕಿರುಕುಳ ಎದುರಿಸುತ್ತಿದ್ದಾರೆ‌ ಎಂದು ಆರೋಪಿಸಿದರು.

ಬೆಳಿಗ್ಗೆ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿನಿಯರು ರಸ್ತೆಗಿಳಿದರೆ ಸಾಕು, ಪುಂಡರು ಅವರ ಬಳಿಗೆ ತೆರಳಿ ಫೋಟೋ ಕ್ಲಿಕ್ಕಿಸುವುದು, ವಿಡಿಯೊ ಸೆರೆ ಹಿಡಿಯುವುದು, ಬೈಕ್ ಸ್ಟಂಟ್ ನಡೆಸಿ, ಹೆದರಿಸುವುದು, ಎದುರಿಗೆ ಬಂದು ಕಿರುಚುವುದು ಸೇರಿ ಇಲ್ಲಸಲ್ಲದ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಇಷ್ಟಕ್ಕೆ ನಿಲ್ಲಿಸದೇ ಕೆಲವರು, ಚಿತ್ರಾವಳಿಗಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಹಾಸ್ಟಲ್‌ಗಳಿಂದ ನಿತ್ಯ ನೂರಾರು ಸಂಖ್ಯೆಯ ವಿದ್ಯಾರ್ಥಿನಿಯರು ಗಂಗಾವತಿ ನಗರ ಹೃದಯಭಾಗ ಮತ್ತು ಹೊರವಲಯದ ಶಾಲಾ- ಕಾಲೇಜುಗಳಿಗೆ ತೆರಳಬೇಕಿದ್ದು, ನಿತ್ಯ ಪುಂಡರ ಕಿರುಕುಳ ಸಹಿಸಿಕೊಂಡು ತೆರಳಬೇಕಾಗಿದೆ. ಕೆಲ ವಿದ್ಯಾರ್ಥಿನಿಯರು ಪುಂಡರ ಕಿರುಕುಳಕ್ಕೆ ಬೇಸತ್ತು. ಹಾಸ್ಟೆಲ್‌ಗಳನ್ನು ಬಿಟ್ಟು ಮನೆಗಳಿಗೆ ತೆರಳಿದ ಸಂದರ್ಭಗಳಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಸತಿ ನಿಲಯದ ಬಳಿ ಮಾತ್ರವಲ್ಲ. ನಗರದ ಬಹುತೇಕ ಸರ್ಕಾರಿ ಶಾಲಾ-ಕಾಲೇಜುಗಳ ಬಳಿ ಪುಂಡರ ಹಾವಳಿಯಿದೆ. ಹೀಗಾಗಿ ಪೊಲೀಸರು ಶಾಲಾ-ಕಾಲೇಜು ಸಮಯ ಮತ್ತು ಹಾಸ್ಟೆಲ್‌ಗಳ ಬಳಿ ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಪುಂಡರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ನೀಡಿದರು.

ಎಸ್ಎಫ್ಐ ಸಂಘಟನೆ ರಾಜ್ಯಾಧ್ಯಕ್ಷ ಅಮರೇಶ ಕಡಗದ, ಕಾರ್ಯದರ್ಶಿ ಶಿವುಕುಮಾರ, ಬಾಲಾಜಿ, ಶರೀಫ್, ನಾಗರಾಜ, ಮಾರುತಿ ಅವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.