
ಕುಕನೂರು: ಕಾರ್ಮಿಕರು ದೇಶದ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡುತ್ತಾರೆ. ಅವರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗನಾಥಸ್ವಾಮಿ ಜೆ. ಹೇಳಿದರು.
ತಾಲ್ಲೂಕಿನ ತಳಕಲ್ ಗ್ರಾಮದ ಅಬ್ದುಲ್ ನಜೀರಸಾಬ್ ಸಮುದಾಯ ಭವನದಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ಕಾರ್ಮಿಕರ ಮೇಲೆ ಇದ್ದ ದೌರ್ಜನ್ಯ ಮತ್ತು ಹೆಚ್ಚು ಕೆಲಸದ ಸಮಯ ಹಾಗೂ ಕಿರುಕುಳ ಇಂತಹ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ’ ಎಂದರು.
ಕಾರ್ಮಿಕ ಇಲಾಖೆಯಿಂದಲೂ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಂಡು ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಮಕ್ಕಳನ್ನು ಯಾರೂ ಕೆಲಸಕ್ಕೆ ಬಳಸಿಕೊಳ್ಳಬಾರದು. ಅವರನ್ನು ಶಿಕ್ಷಣವಂತರನ್ನಾಗಿ ಮಾಡಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದರು.
ವಕೀಲ ಮಲ್ಲನಗೌಡ ಎಸ್. ಪಾಟೀಲ ಮಾತನಾಡಿ, ‘ದೇಶದ ಬಹುತೇಕ ಜನಸಂಖ್ಯೆ ಕಾರ್ಮಿಕರಿದ್ದಾರೆ. ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಕಾರ್ಮಿಕರಿಗೆ ಉಪಯುಕ್ತ ಯೋಜನೆಗಳನ್ನು ರೂಪಿಸಿ ಸಹಾಯಧನ ನೀಡುತ್ತಿದೆ. ಈ ಯೋಜನೆಗಳ ಉಪಯೋಗ ಪಡೆದುಕೊಳ್ಳಿ ಹಾಗೂ ಕನಿಷ್ಠ ವೇತನ ತಮಗೆ ಮಾಲೀಕರು ನೀಡದಿದ್ದರೆ ತಾವುಗಳು ಕಾರ್ಮಿಕ ಇಲಾಖೆಗೆ ಸಂಪರ್ಕಿಸಿ ನ್ಯಾಯಯುತ ವೇತನ ಪಡೆಯುವ ಹಕ್ಕನ್ನು ಪಡೆದುಕೊಳ್ಳಬಹುದು’ ಎಂದರು.
ಗ್ರಾ.ಪಂ ಅಧ್ಯಕ್ಷ ಜಹೀರಾ ಬೇಗಂ, ಕಲ್ಯಾಣ ಕರ್ನಾಟಕ ಒಕ್ಕೂಟ ಸಂಘದ ಅಧ್ಯಕ್ಷ ರಮೇಶ ಘೋರ್ಪಡೆ, ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಮಹಾಂತೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.