ADVERTISEMENT

ಅಂಜನಾದ್ರಿಗೆ ರೋಪ್ ವೇ: ಕೇಂದ್ರದಿಂದ ₹80 ಕೋಟಿ ಬಿಡುಗಡೆಯಾಗಲಿದೆ–ಪರಣ್ಣ ಮುನವಳ್ಳಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 16:15 IST
Last Updated 23 ಫೆಬ್ರುವರಿ 2024, 16:15 IST
ಮಾಜಿ ಶಾಸಕ ಪರಣ್ಣ ಮುನವಳ್ಳಿ
ಮಾಜಿ ಶಾಸಕ ಪರಣ್ಣ ಮುನವಳ್ಳಿ   

ಗಂಗಾವತಿ: ‘ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹80 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಂಜನಾದ್ರಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರವೂ ₹120 ಕೋಟಿ ಅನುದಾನ ಘೋಷಿಸಿ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಹ ನೆರವೇರಿಸಲಾಗಿತ್ತು’ ಎಂದರು.

‘ನಾನು ಶಾಸಕನಾಗಿದ್ದಾಗ ರೋಪ್ ವೇ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಈಗ ಸರ್ಕಾರ ಅನುದಾನ ನೀಡಲು ಮುಂದಾಗಿದೆ. ರೋಪ್ ವೇ ನಿರ್ಮಾಣ ಎನ್‌ಎಚ್ಎಲ್‌ಎಂ ಯೋಜನೆಯಡಿ ಮಂಜೂರಾಗಿದ್ದು, ರೈಟ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಅಧಿಕಾರಿಗಳು ಅಂಜನಾದ್ರಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಲಿದ್ದಾರೆ’ ಎಂದರು.

ADVERTISEMENT

ಬಿಜೆಪಿ ನಗರ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ, ಮುಖಂಡ ಸಂತೋಷ ಕೆ.ಲೋಜಿ, ಹನುಮಂತಪ್ಪ ನಾಯಕ, ನಗರಸಭೆ ಸದಸ್ಯ ನವೀನ ಮಾಲೀಪಾಟೀಲ, ವಾಸುದೇವ ನವಲಿ, ನೀಲಕಂಠ ಕಟ್ಟಿಮನಿ, ಶ್ರೀನಿವಾಸ ಧೂಳ, ಸಂಗಯ್ಯಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.