ಯಲಬುರ್ಗಾ ತಾಲ್ಲೂಕು ಕಲ್ಲೂರು ಗ್ರಾಮದಲ್ಲಿ ತೆರೆಯಲಾದ ನಮ್ಮ ಕ್ಲಿನಿಕ್ ವಿಸ್ತರಣಾ ಕೇಂದ್ರವನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು
ಯಲಬುರ್ಗಾ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿರುವ ಕಾರಣದಿಂದ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಈ ಸೌಲಭ್ಯಗಳ ಪ್ರಯೋಜನೆ ಪಡೆದುಕೊಂಡು ಉತ್ತಮ ಆರೋಗ್ಯದಿಂದ ಇರಬೇಕು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ತೆರೆಯಲಾದ ನಮ್ಮ ಕ್ಲಿನಿಕ್ ವಿಸ್ತರಣಾ ಕೇಂದ್ರವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಪಟ್ಟಣದಿಂದ ಕೇವಲ ಏಳೆಂಟು ಕಿ.ಮೀ. ಅಂತರದಲ್ಲಿರುವ ಕಲ್ಲೂರು ಗ್ರಾಮದಲ್ಲಿಯೇ ಆರೋಗ್ಯ ಸೇವೆ ಕಲ್ಪಿಸಿಕೊಡುವ ಉದ್ದೇಶದಿಂದ ಈ ಸೇವೆಯನ್ನು ಗ್ರಾಮದ ಜನತೆಗೆ ಒದಗಿಸಲಾಗಿದೆ. ಹಾಗೆಯೇ ಗ್ರಾಮದ ಸಮಗ್ರ ಅಭಿವೃದ್ಧಿ ವಿವಿಧ ಯೋಜನೆಗಳ ಮೂಲಕ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದ ಅಭಿವೃದ್ದಿಗಾಗಿ ನೀರಾವರಿ, ಶಿಕ್ಷಣ, ಕೆರೆಗಳ ಅಭಿವೃದ್ಧಿ, ಜಾನುವಾರುಗಳ ಆರೋಗ್ಯ ಸುಧಾರಣೆಗೆ ಪಶು ಆರೋಗ್ಯ ಕೇಂದ್ರಗಳ ಸ್ಥಾಪನೆ ಸೇರಿದಂತೆ ಜನರ, ರೈತರ ಹಾಗೂ ಜಾನುವಾರುಗಳ ಹಿತಕಾಪಾಡಲು ಸಾವಿರಾರು ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ. ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಸಿಮೆಂಟ್ ರಸ್ತೆ, ಗುಣಮಟ್ಟದ ಚರಂಡಿ ಹಾಗೂ ವಿವಿಧ ಸೌಕರ್ಯಗಳನ್ನು ಒದಗಿಸಿ ಹಳ್ಳಿಗಳ ಚಿತ್ರಣ ಬದಲಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಮ್ಮ ಬಬಲಾದ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ನಾಗರತ್ನ ಹಿರೇಮಠ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣಕಾ ಟಂಕದ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಕಾರ್ಯಾಧ್ಯಕ್ಷ ಡಾ. ಶಿವನಗೌಡ ದಾನರೆಡ್ಡಿ, ಸಹಕಾರಿ ಧುರೀಣ ಚಂದ್ರಶೇಖರಯ್ಯ ಹಿರೇಮಠ ಸೇರಿ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.