ADVERTISEMENT

ಶಾಲಾ ಕಟ್ಟಡ ಬಿರುಕು: ಆತಂಕ

ಯಲಬುರ್ಗಾ ತಾಲ್ಲೂಕಿನ ಯಡ್ಡೋಣಿಯ ಆಶ್ರಮ ಶಾಲೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 13:53 IST
Last Updated 23 ಸೆಪ್ಟೆಂಬರ್ 2021, 13:53 IST
ಯಲಬುರ್ಗಾ ತಾಲ್ಲೂಕು ಯಡ್ಡೋಣಿ ಗ್ರಾಮದಲ್ಲಿರುವ ಆಶ್ರಮ ಶಾಲೆಯ ಕಟ್ಟಡ
ಯಲಬುರ್ಗಾ ತಾಲ್ಲೂಕು ಯಡ್ಡೋಣಿ ಗ್ರಾಮದಲ್ಲಿರುವ ಆಶ್ರಮ ಶಾಲೆಯ ಕಟ್ಟಡ   

ಯಡ್ಡೋಣಿ (ಯಲಬುರ್ಗಾ): ಗ್ರಾಮದಲ್ಲಿರುವ ಆಶ್ರಮ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ಬಂದಿದ್ದು, ಭಯದ ನೆರಳಲ್ಲಿಯೇ ಮಕ್ಕಳು ಪಾಠ ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹಿರೇವಂಕಲಕುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗಡಿಭಾಗದ ಗ್ರಾಮದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಸತಿಯಕ್ತ ಗುಣಮಟ್ಟದ ಶಿಕ್ಷಣ ಪೂರೈಸಲು ಸ್ಥಾಪನೆಗೊಂಡ ಈ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗಿನ 110ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಅಗತ್ಯವಾಗಿ ಬೇಕಾದ ಮೂಲ ಸೌಲಭ್ಯ ಇಲ್ಲದಾಗಿದೆ. ತೀರಾ ಹಳೆಯದಾದ ಈ ಕಟ್ಟಡವು ದಿನದಿಂದ ದಿನಕ್ಕೆ ಅವನತಿಯತ್ತ ಸಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆಗಳಿವೆ.

ಕಟ್ಟಡದ ಒಳ ಮತ್ತು ಹೊರ ಗೋಡೆಗಳಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿಯೇ ಬಿರುಕು ಕಾಣಿಸಿಕೊಂಡಿವೆ. ಈ ಬಗ್ಗೆ ಪಾಲಕರು ಸಾಕಷ್ಟು ಸಲ ಸಂಬಂಧಪಟ್ಟ ಮುಖ್ಯಸ್ಥರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ADVERTISEMENT

ಕೋವಿಡ್ ಹಿನ್ನೆಲೆಯಲ್ಲಿ ಪ್ರಸ್ತುತ ತರಗತಿಗಳು ಇನ್ನೂ ಪ್ರಾರಂಭಗೊಂಡಿಲ್ಲ. ಇಂದಲ್ಲ ನಾಳೆ ಪ್ರಾರಂಭಗೊಳ್ಳುವ ತರಗತಿಗಳು ಇದೇ ಶಿಥಿಲಗೊಂಡ ಕಟ್ಟಡದಲ್ಲಿಯೇ ನಡೆಯುವುದರಿಂದ ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಹಮಮಂತಪ್ಪ ಮುಂದಿನಮನಿ, ನಾಗಲಿಂಗಪ್ಪ ಪುಟಗಮರಿ, ಯಮನಪ್ಪ ನಾಯಕ ಹೇಳಿದರು.

‘ಶಾಲೆಯ ಕಟ್ಟಡ ದುರಸ್ಥಿಗೆ ಬಂದಿರುವುದು ಗಮನಕ್ಕಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ, ಸಚಿವರಿಗೆ ಪತ್ರ ಬರೆದು ದುರಸ್ತಿ ಕಾರ್ಯ ಕೈಗೊಳ್ಳಲು ಮನವಿ ಮಾಡಲಾಗಿದೆ. ಬಿರುಕು ಕಾಣಿಸಿಕೊಂಡ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುವುದಿಲ್ಲ. ಸರ್ಕಾರದ ಅನುಮತಿ ದೊರೆತ ಕೂಡಲೇ ಕಟ್ಟಡದ ದುರಸ್ತಿ ಕಾರ್ಯ ಮಾಡಲಾಗುವುದು‘ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿ.ಕೆ. ಬಡಿಗೇರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.