ADVERTISEMENT

ಕನಕಗಿರಿ | ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

ಪೂರ್ಣಗೊಳ್ಳದ ಮೌಲಾನಾ ಆಜಾದ್ ಇಂಗ್ಲಿಷ್‌ ಮಾಧ್ಯಮ ಶಾಲೆಯ ಕಾಮಗಾರಿ

ಮೆಹಬೂಬ ಹುಸೇನ
Published 4 ಜುಲೈ 2025, 6:25 IST
Last Updated 4 ಜುಲೈ 2025, 6:25 IST
ಶಾಲೆಯ ಮೆಟ್ಟಿಲುಗಳಿಗೆ ಪ್ಲಾಸ್ಟರ್ ಮಾಡದಿರುವುದು
ಶಾಲೆಯ ಮೆಟ್ಟಿಲುಗಳಿಗೆ ಪ್ಲಾಸ್ಟರ್ ಮಾಡದಿರುವುದು   

ಕನಕಗಿರಿ: ಕಾಮಗಾರಿ ಆರಂಭಗೊಂಡು ಐದು ವರ್ಷ ಕಳೆದರೂ ಪೂರ್ಣಗೊಳ್ಳದ ಪರಿಣಾಮ ವಿದ್ಯಾರ್ಥಿಗಳು ಮಳೆ, ಬಿಸಿಲು ಹಾಗೂ ಚಳಿ ಎನ್ನದೆ ಬಯಲಲ್ಲಿ ಕುಳಿತು ಪಾಠ ಕೇಳಬೇಕಾದ ದುಸ್ಥಿತಿ ಇಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್‌ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳದು.

2013-2018ರ ಅವಧಿಯಲ್ಲಿ ಮಂಜೂರಾಗಿದ್ದ ಈ ಶಾಲೆಯನ್ನು ಮೊದಲು ಶಾದಿ ಮಹಲ್ ಹಾಗೂ ಸರ್ಕಾರಿ ಉರ್ದು ಶಾಲೆಯಲ್ಲಿ ನಡೆಸಲಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದಾಗ ಪಾಲಕರ ಒತ್ತಾಯಕ್ಕೆ ಮಣಿದು ಇಲಾಖೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (ಸರ್ಕಾರಿ ಪ್ರೌಢಶಾಲೆ) ಹಳೆಯ ಕೊಠಡಿಗಳಿಗೆ ಸ್ಥಳಾಂತರಗೊಳಿಸಿತು.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು 10 ಶಾಲಾ ಕೊಠಡಿಗಳು, ಹೊರಗೋಡೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒಟ್ಟು ₹2.96 ಕೋಟಿ ಬಿಡುಗಡೆ ಮಾಡಿತ್ತು. ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಉಸ್ತುವಾರಿ ವಹಿಸಿದೆ.

ADVERTISEMENT

‘ತಬ್ರೇಜ್ ಬಳ್ಳಾರಿ ಅವರು ದಾನವಾಗಿ‌ ನೀಡಿರುವ ಜಾಗದಲ್ಲಿ ಮೂರು ವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿ ಇಲ್ಲಿವರೆಗೂ ಪೂರ್ಣಗೊಳಿಸಿಲ್ಲ’ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಪಾಷ‌ ಮುಲ್ಲಾರ ದೂರಿದರು.

‘ಈಚೆಗೆ ಶಾಲಾ ಕೊಠಡಿಗಳಿಗೆ ಸುಣ್ಣಬಣ್ಣ ಹಚ್ಚಿ, ಟೈಲ್ಸ್ ಜೋಡಿಸಲಾಗಿದೆ. ಕಿಟಕಿ, ಬಾಗಿಲು‌ ಜೋಡಿಸಿದ್ದು ಯಾವ ಕೊಠಡಿಗಳಿಗೂ ವಿದ್ಯುತ್ ಸಂಪರ್ಕ ಇಲ್ಲ. ಕಾಮಗಾರಿ ಸ್ಥಳಕ್ಕೆ ಭೇಟಿ‌ ನೀಡಿದರೆ ಕಳಪೆಯಾಗಿರುವುದು‌ ಗೋಚರವಾಗುತ್ತದೆ. ಶಾಲೆಯ ಪ್ಲಾಟ್‌ಫಾರ್ಮ್‌ಗಳು ಬಹಳಷ್ಟು ಚಿಕ್ಕದಾಗಿವೆ. ಅವುಗಳಿಗೆ ಪ್ಲಾಸ್ಟರ್ ಮಾಡಿಲ್ಲ ಹಾಗೂ ಬಣ್ಣ ಸಹ ಹಚ್ವಿಲ್ಲ’ ಎಂದು ಮುಲ್ಲಾರ ದೂರುತ್ತಾರೆ.

‘ಶಾಲೆಯಲ್ಲಿ ಪ್ರಾರ್ಥನೆ ಮಾಡುವ ಜಾಗ ಸಹ ಸಮತಟ್ಟು ಮಾಡಿಲ್ಲ. 290 ವಿದ್ಯಾರ್ಥಿಗಳು ಇದ್ದು ಶಾಲಾ ಮೈದಾನಕ್ಕೆ ಜಾಗದ ಸಮಸ್ಯೆ ಇದೆ’ ಎಂದು ಪಾಲಕರು ದೂರುತ್ತಾರೆ.

‘ಇನ್ನೂ ಕೆಪಿಎಸ್ ಶಾಲೆಯ ಕೊಠಡಿಗಳಲ್ಲಿ ಆಜಾದ್ ಶಾಲೆಯ ತರಗತಿಗಳು ನಡೆಯುತ್ತಿದ್ದು, ತರಗತಿಗನುಗುಣವಾಗಿ ಕೊಠಡಿಗಳು‌ ಇಲ್ಲಿ ಇಲ್ಲ. ಶಾಲೆಯ‌ ಮೈದಾನದಲ್ಲಿ ಪ್ಲಾಸ್ಟಿಕ್ ತಾಡಪಾಲು ಹಾಕಿ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಬಯಲಲ್ಲಿ ಪಾಠ ಮಾಡುವ ದುಸ್ಥಿತಿ ಇದೆ. ಮಳೆಗಾಲದಲ್ಲಿ ನಮ್ಮ ಗೋಳು ಕೇಳುವವರು ಇಲ್ಲವಾಗಿದ್ದಾರೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಕನಕಗಿರಿಯ ಮೌಲಾನಾ ಆಜಾದ್ ಇಂಗ್ಲಿಷ್ ಮಾಧ್ಯಮ ಶಾಲೆಯ ಕೊಠಡಿಗಳ ಹೊರನೋಟ
ಶಾಲೆಯ ಶೌಚಾಲಯ ಕಾಮಗಾರಿ ಅಪೂರ್ಣಗೊಂಡಿರುವುದು
ಕೆಆಡ್‌ಡಿಎಲ್‌ನವರು ಕಾಮಗಾರಿಯನ್ನು ಸಮರ್ಪಕವಾಗಿ ಮಾಡಿಲ್ಲ. ಶೌಚಾಲಯ ಕಳಪೆ ನಿರ್ಮಾಣ ಕಾರಣ ನಿಲ್ಲಿಸಲಾಗಿದೆ. ವಿದ್ಯುತ್ ರಸ್ತೆ ಸೌಲಭ್ಯಗಳನ್ನು ಬೇಗನೆ ಕಲ್ಪಿಸಿ ಕಟ್ಟಡವನ್ನು ಮೌಲಾನ್ ಆಜಾದ ಶಾಲೆಗೆ ಬಿಟ್ಟುಕೊಡಬೇಕು
-ಮಹ್ಮದಪಾಷ ಮುಲ್ಲಾರ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ
ಶೌಚಾಲಯ ಕಳಪೆ ಬಗ್ಗೆ ಸ್ಥಳೀಯರು ದೂರಿದ‌ ಹಿನ್ನೆಲೆಯಲ್ಲ ಕೆಲಸ‌ನಿಲ್ಲಿಸಿ ಗುಣಮಟ್ಟ‌ ಕಾಪಾಡುವಂತೆ‌ ಸೂಚಿಸಲಾಗಿದೆ. ವಿದ್ಯುತ್ ಸೌಲಭ್ಯ ಕಲ್ಪಿಸಿ ಜಾಗವನ್ನು ಸಮತಟ್ಟಾಗಿಸಿ ಅನುಕೂಲ ಮಾಡಿಕೊಡಲಾಗುವುದು
-ಅಜಮೀರ ಅಲಿ ಜಿಲ್ಲಾ ಅಲ್ಪಸಂಖ್ಯಾತರ‌ ಕಲ್ಯಾಣ‌ ಇಲಾಖೆ ಕೊಪ್ಪಳ

ತಿಂಗಳ ಗಡುವು: ಕೆಪಿಎಸ್ ಶಾಲೆಯಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಕೊಠಡಿಗಳ ಬೇಡಿಕೆ ಇದೆ. ಹೀಗಾಗಿ ಕೊಠಡಿ ಬಿಟ್ಟುಕೊಡುವಂತೆ ಶಾಲೆಯ ಉಪ ಪ್ರಾಂಶುಪಾಲರು ಈಚೆಗೆ ಪತ್ರ ಬರೆದು ತಾಕೀತು ಮಾಡಿ ಮತ್ತೆ ತಿಂಗಳ ಗಡುವು ನೀಡಿದ್ದಾರೆ. ಅಷ್ಟರೊಳಗೆ ಕಾಯಂ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ‌ ಕೊಡಿಸಿ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಪಾಲಕರು ಒತ್ತಾಯಿಸಿದ್ದಾರೆ.

ಅತಿಥಿ ಶಿಕ್ಷಕರೇ ಗತಿ: ಶಾಲೆ ಆರಂಭಗೊಂಡು ಹತ್ತು ವರ್ಷ ಗತಿಸುತ್ತಾ ಬಂದರೂ ಪ್ರಾಂಶುಪಾಲ ಸೇರಿದಂತೆ 6 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇಂಗ್ಲಿಷ್ ಗಣಿತ ಇತರೆ ವಿಷಯಗಳಿಗೆ ಅತಿಥಿ ಶಿಕ್ಷಕರು ಗತಿಯಾಗಿದ್ದರೂ ಶಾಲೆ ಫಲಿತಾಂಶದಲ್ಲಿ ಮುಂದೆ ಇದೆ. ಈಚೆಗೆ ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರೊಬ್ಬರು ಪ್ರಭಾರ ಪ್ರಾಂಶುಪಾಲ ಹುದ್ದೆ‌ ನಿಭಾಯಿಸುತ್ತಿದ್ದಾರೆ.

ಕ್ಯಾರೇ ಎನ್ನದ ಎಂಜಿನಿಯರ್

ಕಾಮಗಾರಿ ಕೈಗೆತ್ತಿಕೊಂಡಿರುವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಎಂಜಿನಿಯರ್ ದೇವರಾಜ ಅವರು ಕೊಠಡಿಗಳನ್ನು ಪೂರ್ಣಗೊಳಿಸದೆ‌ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರು ದೂರುತ್ತಾರೆ. ಕಾಮಗಾರಿಗೆ ಮಂಜೂರಾದ ಎಲ್ಲಾ ಹಣವನ್ನು ನಿಗಮಕ್ಕೆ ನೀಡಿದ್ದರೂ ಕೆಲಸ ಪೂರ್ಣಗೊಳಿಸಿಲ್ಲ ಎಂದು ಅವರು ಮಾಹಿತಿ ನೀಡಿದರು. ‘ಕಾಮಗಾರಿ ಪೂರ್ಣಗೊಳಿಸಿ ಎಂದು ಹತ್ತಾರು ಸಲ ನಿಗಮಕ್ಕೆ ಪತ್ರ ಬರೆಯಲಾಗಿದೆ. ಸಾಲದು ಎಂಬಂತೆ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ನಿಗಮದ ಎಂಡಿ ಅವರ‌ ಗಮನಕ್ಕೆ ತರಲಾಗಿದೆ. ಎಂಜಿನಿಯರ್ ಎಇಇ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.