ADVERTISEMENT

ಶಾಲೆಗಳ ನಿರ್ವಹಣೆಗೆ ಅನುದಾನ ಕೊರತೆ

ವೇತನದ ಹಣ ವೆಚ್ಚ ಮಾಡಿ ಕೈಸುಟ್ಟುಕೊಂಡ ಮುಖ್ಯಶಿಕ್ಷಕರು

ಮೆಹಬೂಬ ಹುಸೇನ
Published 5 ಡಿಸೆಂಬರ್ 2022, 4:15 IST
Last Updated 5 ಡಿಸೆಂಬರ್ 2022, 4:15 IST

ಕನಕಗಿರಿ: ಶಾಲಾಡಳಿತ ನಿರ್ವಹಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ತಾಲ್ಲೂಕಿನ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕಳೆದ ಜೂನ್‌ ತಿಂಗಳಿಂದ ಇಲ್ಲಿಯವರೆಗೆ ಯಾವುದೇ ಅನುದಾನ ಮಂಜೂರಿ ಮಾಡದ ಪರಿಣಾಮ ತಮ್ಮ ವೇತನದ ಹಣವನ್ನು ವೆಚ್ಚ ಮಾಡಿ ಕೈ ಸುಟ್ಟುಕೊಂಡಿದ್ದಾರೆ.

ಶಾಲಾ ನಿರ್ವಹಣೆಗೆ ದಿನನಿತ್ಯ ಬೇಕಾದ ಚಾಕ್‌ಪೀಸ್, ಡಸ್ಟರ್, ಕಸಬರಿಗೆ, ಹಾಜರಿ ಪುಸ್ತಕ, ದಾಖಲಾತಿ ರಜಿಸ್ಟರ್ ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಕೀಲಿಕೈ ಖರೀದಿ, ಶಾಲಾ ಕೊಠಡಿಗಳ ಬಾಗಿಲು, ಕಿಟಕಿಗಳ ದುರಸ್ತಿಗೂ ಮುಖ್ಯಶಿಕ್ಷಕರು ಪರದಾಡುವಂತಾಗಿದೆ.

ಕಿರು ಪರೀಕ್ಷೆ, ಸೆಮಿಸ್ಟರ್ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆಗಳನ್ನು ನಕಲು ಮಾಡಿಸುವುದು ಸಹ ಕಷ್ಟಕರವಾಗಿದೆ. ಪ್ರತಿ ಶಾಲೆ ವಿದ್ಯುತ್ ಬಿಲ್ ತಿಂಗಳಿಗೆ ಕನಿಷ್ಠ ಒಂದು ಸಾವಿರ ರೂಪಾಯಿ ಬರುತ್ತಿದ್ದು ವೇತನದಿಂದ ಪಾವತಿ ಮಾಡಬೇಕಾಗಿದೆ ಎಂದು ಹೆಸರು ಹೇಳಬಯಸದ ಮುಖ್ಯಶಿಕ್ಷಕರೊಬ್ಬರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ADVERTISEMENT

ರಾಷ್ಟ್ರೀಯ ಹಬ್ಬ ಸೇರಿದಂತೆ ವಿವಿಧ ಮಹನೀಯರ ಜಯಂತಿಗಳನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಲು ಇಲಾಖೆ ಸೂಚಿಸಿದೆ. ಹೀಗಾಗಿ ತಿಂಗಳಲ್ಲಿ ಒಮ್ಮೊಮ್ಮೆ ನಾಲ್ಕು ಜಯಂತಿಗಳು ಬರುತ್ತಿವೆ. ಒಂದು ಜಯಂತಿಗೆ ಹೂವಿನ ಹಾರ, ತೆಂಗಿನಕಾಯಿ, ಉದೀನ ಕಡ್ಡಿ, ಸಕ್ಕರೆ ಸೇರಿದಂತೆ ಅಂದಾಜು ₹200 ಬೇಕಾಗುತ್ತದೆ. ಸ್ವಾತಂತ್ರ್ಯ, ಗಣರಾಜ್ಯೋತ್ಸವ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಗೆ ಸಾವಿರಾರು ರೂಪಾಯಿ ಬೇಕಾಗುತ್ತದೆ. ಹೀಗಾಗಿ ಸಾಲ ಮಾಡಿ ಹಬ್ಬ, ಜಯಂತಿ ಆಚರಿಸಿ ಫೋಟೋ ಸಹಿತ ವರದಿ ನೀಡಬೇಕಾಗಿದೆ ಎಂದು ವಿವರಿಸಿದರು.

ದಿನಪತ್ರಿಕೆಗಳ ಮಾಸಿಕ ಬಿಲ್ ಪಾವತಿಗೂ ತೊಂದರೆ ಆಗುತ್ತಿದ್ದು, ಕೆಲ ತಿಂಗಳಿಂದ ಪತ್ರಿಕೆಗಳನ್ನು ಶಾಲೆಗಳಿಗೆ ಹಾಕಿಸುವುದನ್ನು ನಿಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

‘ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಟೀ, ಬಿಸ್ಕತ್‌ ತರಿಸಲು ಹಣ ನೀಡಲು ಶಿಕ್ಷಕರು ಪರಸ್ಪರ ಮುಖ ನೋಡುವಂತಾಗಿದೆ’ ಎಂದು ಸ್ಥಳೀಯ ಶಾಲೆಯ ಶಿಕ್ಷಕರೊಬ್ಬರು ಸಂಕೋಚದಿಂದಲೇ ತಿಳಿಸಿದರು.

ಕಂಪ್ಯೂಟರ್ ಸೌಲಭ್ಯ ಇಲ್ಲ:

ಕನಕಗಿರಿ ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ಸೌಲಭ್ಯ ಇಲ್ಲ. ಪ್ರತಿ ವರ್ಷ ಶಾಲೆ ಆರಂಭವಾದ ದಿನದಿಂದ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗಳ ಹಾಜರಾತಿ, ಬಿಸಿಯೂಟ ಮಾಹಿತಿ, ಕಿರು ಪರೀಕ್ಷೆ, ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಎಸ್‌ಟಿಎಸ್‌ನಲ್ಲಿ ಸೇರಿಸುವುದು ಕಷ್ಟದಾಯಕವಾಗಿದೆ. ಶಿಕ್ಷಕರು ಖಾಸಗಿ ಸೇವಾ ಕೇಂದ್ರಕ್ಕೆ ಹೋಗಿ ನೂರಾರು ರೂಪಾಯಿ ನೀಡಿ ದಾಖಲಾತಿಗಳನ್ನು ಸೇರಿಸುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.