
ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶೌಚಾಲಯ, ಅಡುಗೆ ಕೋಣೆ ಹಾಗೂ ಆಟದ ಮೈದಾನ ಸೇರಿ ಅನೇಕ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ.
ಇಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೂ ತರಗತಿಗಳು ನಡೆಯುತ್ತವೆ. 68 ಮಕ್ಕಳು ಓದುತ್ತಿದ್ದಾರೆ. ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಲೆಯ ಆವರಣದಲ್ಲಿರುವ ಶೌಚಾಲಯ ಪಾಳು ಬಿದ್ದಿದೆ. ವಿದ್ಯಾರ್ಥಿಗಳು ಶೌಚಕ್ಕೆ ಬಯಲಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಶೌಚಾಲಯ ಇಲ್ಲದೇ ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಇಲ್ಲಿನ ಗ್ರಾಮ ಪಂಚಾಯಿತಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗದೇ ಇರುವುದು ದುರಂತವಾಗಿದೆ.
ಶಾಲೆ ಮುಂಭಾಗ ಮತ್ತು ಸುತ್ತಮುತ್ತ ಸಂಪೂರ್ಣ ಗಲೀಜು ವಾತಾವರಣ ಇದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ಗಲೀಜು ವಾತಾವರಣ ನಾನಾ ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕಾದ ಸ್ಥಳೀಯ ಗ್ರಾಮ ಪಂಚಾಯಿತಿ ಮೌನವಹಿಸಿದೆ.
ಒಂದೇ ಕೊಠಡಿಯಲ್ಲಿ ಊಟ, ಪಾಠ: ಈ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದೆ. ಕಾರಣ ಒಂದೇ ಕೊಠಡಿಯನ್ನು ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲು ಹಾಗೂ ಸಿಬ್ಬಂದಿ ಮಕ್ಕಳಿಗೆ ಅಡುಗೆ ತಯಾರಿಸಲು ಉಪಯೋಗಿಸುತ್ತಿದ್ದಾರೆ. ಇದರಿಂದ ಅಡುಗೆ ಮಾಡುವಾಗ ಏನಾದರೂ ಅನಾಹುತ ಸಂಭವಿಸದರೇ ಯಾರು ಹೊಣೆ? ಪಾಠ ಮಾಡುವ ಕೊಠಡಿಯಲ್ಲೇ ಅಡುಗೆ ಮಾಡುವುದು ಸರಿಯೇ ಎಂದು ಪಾಲಕರು ಪ್ರಶ್ನಿಸುತ್ತಾರೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಮಕ್ಕಳ ಪಾಲಕರು ಒತ್ತಾಯಿಸುತ್ತಾರೆ.
ಹಲವಾರು ಬಾರಿ ಮನವಿ ಮಾಡಿದರೂ ಬೆಟಗೇರಿ ಗ್ರಾ.ಪಂ ನಿರ್ಲಕ್ಷ್ಯ ವಹಿಸುತ್ತಿದೆ. ಮೇಲಧಿಕಾರಿಗಳು ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಲೆಯಲ್ಲಿರುವ ಸಮಸ್ಯೆಗಳ ಕಡೆಗೆ ಗಮನ ಹರಿಸಿ ಸರಿಪಡಿಸಬೇಕು ಎಂದು ಗ್ರಾಮಸ್ಥ ಮೈಲಪ್ಪ ನಡುವಿನಮನಿ ಒತ್ತಾಯಿಸುತ್ತಾರೆ.ಅಡುಗೆ ಕೋಣೆ ಅಪೂರ್ಣ ಇಲ್ಲಿನ ಶಾಲಾ ಆವರಣದಲ್ಲಿ ಅಡುಗೆ ಕೋಣೆ ಕಾಮಗಾರಿ ನಡೆಯುತ್ತಿದೆ. ಆದರೆ ಕೆಲ ದಿನಗಳಿಂದ ಅದು ಸ್ಥಗಿತಗೊಂಡಿದೆ. ಅಪೂರ್ಣವಾಗಿದೆ. ಇಲ್ಲಿನ ಶಾಲಾ ಆವರಣ ಸಮತಟ್ಟಿಲ್ಲದ ಕಾರಣ ಮಳೆಯಾದರೇ ಸಾಕು ಆವರಣ ಸಂಪೂರ್ಣ ಕೆರೆಯಂತಾಗುತ್ತದೆ.
ಯಾರು ಏನೆಂದರು?
ಶೌಚಾಲಯ ಅಡುಗೆ ಕೋಣೆ ನಿರ್ಮಾಣ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲು ಅನೇಕ ಬಾರಿ ಗ್ರಾ.ಪಂ ಅವರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲಸಿದ್ದಪ್ಪ ಕಲಕೇರಿ ಎಸ್‌ಡಿಎಂಸಿ ಅಧ್ಯಕ್ಷ
ಶಾಲೆಯಲ್ಲಿ ಮೂಲ ಸೌಕರ್ಯ ಕೊರತೆ ಇರುವುದು ಗಮನದಲ್ಲಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದುಹನುಮಂತಪ್ಪ ಬಿಇಒ ಕೊಪ್ಪಳ
ಅಡುಗೆ ಕೋಣೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿದ್ದು ಕೂಡಲೇ ನರೇಗಾ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸುವಂ ತೆ ಮನವಿ ಮಾಡುತ್ತೇನೆಮಲ್ಲಿಕಾರ್ಜುನ ಅಕ್ಷರ ದಾಸೋಹ ಅಧಿಕಾರಿ
ಕೂಡಲೇ ಸಿಬ್ಬಂದಿ ಮೂಲಕ ಸ್ವಚ್ಛ ಮಾಡಿಸಲಾಗುವುದು. ಶೌಚಾಲಯ ಹಾಗೂ ಅಡುಗೆ ಕೋಣೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದುಮರಿಸ್ವಾಮಿ ಪಿಡಿಒ ಗ್ರಾ.ಪಂ ಬೆಟಗೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.