ADVERTISEMENT

ಮನೆಯಂಗಳದಲ್ಲಿ ‘ವಿಜ್ಞಾನದ ರಂಗೋಲಿ’ 

ಜುಮಲಾಪುರ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿನೂತನ ಸ್ಪರ್ಧೆ

ನಾರಾಯಣರಾವ ಕುಲಕರ್ಣಿ
Published 22 ಫೆಬ್ರುವರಿ 2021, 13:26 IST
Last Updated 22 ಫೆಬ್ರುವರಿ 2021, 13:26 IST
ಪ್ರೌಢಶಾಲೆ ಮಕ್ಕಳು ಮನೆ ಅಂಗಳದಲ್ಲಿ ಬಿಡಿಸಿದ ವಿಜ್ಞಾನ ಚಿತ್ರಗಳ ರಂಗೋಲಿ
ಪ್ರೌಢಶಾಲೆ ಮಕ್ಕಳು ಮನೆ ಅಂಗಳದಲ್ಲಿ ಬಿಡಿಸಿದ ವಿಜ್ಞಾನ ಚಿತ್ರಗಳ ರಂಗೋಲಿ   

ಜುಮಲಾಪುರ (ಕುಷ್ಟಗಿ): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪಾಲಕರ ಸಹಕಾರಕ್ಕೆ ಮುಂದಾಗಿದ್ದಾರೆ.

ಭೇಟಿ ಕಾರ್ಯಕ್ರಮವನ್ನೇ ರಚನಾತ್ಮಕವಾಗಿ ರೂಪಿಸಿರುವ ಶಿಕ್ಷಕರು ಮಕ್ಕಳಲ್ಲಿನ ಸೃಜಶೀಲತೆಯನ್ನೂ ಓರೆಗೆ ಹಚ್ಚುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ಬಣ್ಣ ಬಣ್ಣದ ರಂಗೋಲಿಯಲ್ಲಿ ವಿಜ್ಞಾನ ಪಾಠದಲ್ಲಿ ಬರುವ ಚಿತ್ರಗಳನ್ನು ಚಿತ್ರಿಸುವ ವಿನೂತನ ಸ್ಪರ್ಧೆ ಏರ್ಪಡಿಸುವ ಮೂಲಕ ಮನೆ ಭೇಟಿ ಕಾರ್ಯಕ್ರಮಕ್ಕೆ ಹೊಸ ರೂಪ ನೀಡಿರುವುದು ಸಾರ್ವಜನಿಕ ಹಾಗೂ ಶಿಕ್ಷಣ ಇಲಾಖೆಯ ಗಮನಸೆಳೆದಿದೆ.

ಶಾಲೆ ವ್ಯಾಪ್ತಿಯಲ್ಲಿನ ಜುಮಲಾಪುರ, ಸಾಸ್ವಿಹಾಳ, ಜೆ.ರಾಂಪುರ ಮತ್ತು ಅಡವಿಭಾವಿ ಗ್ರಾಮಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅವರವರ ಮನೆ ಅಂಗಳದ ಸ್ಥಳವನ್ನೇ ರಂಗೋಲಿ ಬಿಡಿಸುವುದಕ್ಕೆ ಆಯ್ಕೆ ಮಾಡಲಾಗಿತ್ತು. ಅದೇ ರೀತಿ ರಂಗೋಲಿಯಲ್ಲಿ ಮಾನವ ದೇಹದ ವಿವಿಧ ಅಂಗಾಗಳ ಚಿತ್ರ ಬಿಡಿಸುವುದು ಸ್ಪರ್ಧೆಯ ವಿಷಯವಾಗಿತ್ತು. ಮನೆಯ ಮುಂದೆ ದೈನಂದಿನ ರಂಗೋಲಿಯ ಬದಲು ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳು ವಿವಿಧ ಬಣ್ಣಗಳಲ್ಲಿ ರಾರಾಜಿಸಿದವು. ಈ ವಿಷಯದಲ್ಲಿ ಶಿಕ್ಷಕರ ಮಾರ್ಗದರ್ಶನ, ವಿದ್ಯಾರ್ಥಿಗಳಲ್ಲಿನ ಆಸಕ್ತಿ ಮತ್ತು ಜನರು ತಮ್ಮೂರಿನ ಮಕ್ಕಳ ಕಲೆಗೆ ಪ್ರೋತ್ಸಾಹಿಸಿ ಕುತೂಹಲದಿಂದ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ್ದು, ಗಮನಸೆಳೆಯಿತು.

ADVERTISEMENT

ಅಚ್ಚರಿಯಂದರೆ ಕೆಲ ಮಕ್ಕಳಿಗೆ ರಂಗೋಲಿ ಬಿಡಿಸುವುದಕ್ಕೆ ಮನೆಯ ಮುಂದೆ ಅಂಗಳವೇ ಇರಲಿಲ್ಲ. ಅಂಥವರು ಪಕ್ಕದ ದಾರಿ, ಬೇರೆಯವರ ಅಂಗಳ, ಮನೆಯ ಬಳಿಯ ಜಗುಲಿ ಅಷ್ಟೇ ಏಕೆ ಮನೆಯ ಮಾಳಿಗೆಯನ್ನೂ ಚಿತ್ರ ಬಿಡಿಸುವ ಸ್ಥಳವನ್ನಾಗಿಸಿಕೊಂಡಿದ್ದು.

‘ಮನೆ ಭೇಟಿಯ ಈ ಸಂದರ್ಭವನ್ನು ಸಾರ್ಥಕಪಡಿಸಿಕೊಂಡ ಶಿಕ್ಷಕರು, ಇದೇ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ, ಫಲಿತಾಂಶ ಸುಧಾರಣೆ, ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾಲಕರೊಂದಿಗೆ ಸಮಾಲೋಚನೆ ನಡೆಸಿದರು’ ಎಂದು ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ ವಿವರಿಸಿದರು.

‘ಎಲ್ಲ ಪಾಲಕರು ಬಹಳಷ್ಟು ಆಸಕ್ತಿ ವಹಿಸಿ ವಿದ್ಯಾರ್ಥಿಗಳ ಹಾಗೂ ಪಾಲಕ ಸ್ನೇಹಿಯಾದ ಈ ಪ್ರಯತ್ನಕ್ಕೆ ಸಹಕಾರ ನೀಡಿದರು’ ಎಂದು ವಿಜ್ಞಾನ ಶಿಕ್ಷಕ ಶಶಿಧರ ಗೊರೆಬಾಳ ಸಂತಸ ಹಂಚಿಕೊಂಡರು.

ಸ್ಪರ್ಧೆಯ ತೀರ್ಪಿಗೆ ಶಿಕ್ಷಕರ ಮೂರು ತಂಡಗಳನ್ನು ರಚಿಸಲಾಗಿತ್ತು. ಪ್ರತಿ ತಂಡಕ್ಕೆ ನಾಲ್ಕು ಬಹುಮಾನಗಳನ್ನು ನೀಡಲಾಗುತ್ತದೆ. ಅದೇ ರೀತಿ ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳ ಚಿತ್ರಗಳ ಛಾಯಾಚಿತ್ರದ ಪ್ರಿಂಟ್‌ ತೆಗೆದು ಅಲ್ಬಂ ತಯಾರಿಸಲಾಗುತ್ತದೆ ಎಂದು ಶಿಕ್ಷಕರು ಹೇಳಿದರು.

ವಿದ್ಯಾರ್ಥಿಗಳ ಮನೆಯಂಗಳದ ವಿಜ್ಞಾನ ಚಿತ್ರಗಳ ರಂಗೋಲಿ ಚಿತ್ರಗಳು ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿದ್ದು, ಜನಮನ್ನಣೆಗೆ ಪಾತ್ರವಾಗಿವೆ. ಅಲ್ಲದೆ ಇದು ಶಿಕ್ಷಣ ಇಲಾಖೆಯ ಗಮನಸೆಳೆದಿದ್ದು ಶಿಕ್ಷಕರ ರಚನಾತ್ಮಕ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.