ADVERTISEMENT

ಕುಷ್ಟಗಿ: ಪವನ ವಿದ್ಯುತ್ ಕಂಪನಿಯ ಭದ್ರತಾ ವ್ಯವಸ್ಥಾಪಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 15:52 IST
Last Updated 28 ನವೆಂಬರ್ 2022, 15:52 IST
ಘಟನೆ ನಡೆದ ಸಂದರ್ಭ
ಘಟನೆ ನಡೆದ ಸಂದರ್ಭ   

ಕುಷ್ಟಗಿ (ಕೊಪ್ಪಳ ಜಿಲ್ಲೆ): ಖಾಸಗಿ ವಲಯದ ಪವನ ವಿದ್ಯುತ್ ಕಂಪನಿಯ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಕುಷ್ಟಗಿ ತಾಲ್ಲೂಕಿನ ಕೇಸೂರು ಗ್ರಾಮದ ಬಳಿ ನಡೆದಿದೆ.

ಗುಜರಾತ್‌ ಮೂಲದ ಸುಜಲಾನ್ ಖಾಸಗಿ ಪವನ ವಿದ್ಯುತ್ ಕಂಪನಿಯಲ್ಲಿ ಭದ್ರತಾ ವ್ಯವಸ್ಥಾಪಕರಾಗಿರುವ ಮಹ್ಮದ್‌ರಫಿ ಬೆಂಡೋಣಿ ಹಲ್ಲೆಗೆ ಒಳಗಾದವರು. ಆರೋಪಿ ದೋಟಿಹಾಳ ಗ್ರಾಮದ ಮೈನುದ್ದೀನ್‌ಸಾಬ ಹಿರೇಮನಿ ಎಂಬಾತನನ್ನು ಇಲ್ಲಿಯ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಘಟನೆ ವಿವರ: ಕೇಸೂರು ಗ್ರಾಮದ ಸೀಮಾಂತರದ ಆರೋಪಿಗೆ ಸೇರಿದ ಜಮೀನಿನ್ನು ಕೆಲ ವರ್ಷಗಳವರೆಗೆ ನಿಯಮಗಳ ಪ್ರಕಾರ ಒಪ್ಪಂದದ ಆಧಾರದ ಮೇಲೆ ಗುತ್ತಿಗೆ ಪಡೆದಿರುವ ಸುಜಲಾನ್ ಕಂಪನಿ ಟವರ್ ಅಳವಡಿಸಿದೆ. ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ನ. 24ರಂದು ದುರಸ್ತಿ ಕೆಲಸ ನಡೆಸಲಾಗುತ್ತಿತ್ತು.

ADVERTISEMENT

ಮಹ್ಮದ್‌ರಫಿ ಅಲ್ಲಿ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದರು. ಸ್ಥಳಕ್ಕೆ ಬಂದ ಆರೋಪಿ ತನಗೆ ಇನ್ನೂ ಬರಬೇಕಿರುವ ಹಣ ಕೊಡಬೇಕು, ಅಲ್ಲಿಯವರೆಗೂ ಕೆಲಸ ನಡೆಸಬಾರದು ಎಂದು ತಕರಾರು ತೆಗೆದಿದ್ದಾರೆ. ಆದರೆ ಕಾನೂನಿನ ಅನ್ವಯ ಜಮೀನು ಗುತ್ತಿಗೆ ಪಡೆದು ಒಪ್ಪಂದದ ಪ್ರಕಾರ ಕೆಲ ವರ್ಷಗಳ ಹಿಂದೆಯೇ ಪೂರ್ಣ ಹಣ ಪಾವತಿಸಲಾಗಿದ್ದು ಯಾವುದೇ ಬಾಕಿ ಇಲ್ಲ ಎಂದು ಅಲ್ಲಿಯ ಸಿಬ್ಬಂದಿ ಹೇಳಿದ್ದಾರೆ. ಅದಕ್ಕೆ ಒಪ್ಪದ ಆರೋಪಿ ಏಕಾಏಕಿ ಬಡಿಗೆಯಿಂದ ಮಾಜಿ ಸೈನಿಕ ಮಹ್ಮದ್‌ರಫಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಮಹ್ಮದ್ ರಫಿ ರಕ್ಷಣೆಗೆ ಹೋದ ಇತರೆ ಸಿಬ್ಬಂದಿಯನ್ನು ಆರೋಪಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಹ್ಮದ್ ರಫಿ ನೀಡಿರುವ ದೂರಿನ ಅನ್ವಯ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ ಕಲಂಗಳ ಅನ್ವಯ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.