ADVERTISEMENT

ಲಿಂಗಾಯತರ ಭಾವನೆಗೆ ಧಕ್ಕೆ ತಂದ ಶಾಮನೂರು: ಜಾಗತಿಕ ಲಿಂಗಾಯತ ಮಹಾಸಭಾ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 9:34 IST
Last Updated 30 ಏಪ್ರಿಲ್ 2020, 9:34 IST
   

ಬೆಂಗಳೂರು: ‘ಎತ್ತಿನ ಪೂಜೆ ಮಾಡಿ ಬಸವೇಶ್ವರರ ಜಯಂತಿಯನ್ನು ಆಚರಿಸುವ ಮೂಲಕ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಬಸವಣ್ಣನವರನ್ನು ಒಂದು ಪ್ರಾಣಿಗೆ ಹೋಲಿಸಿದ್ದಾರೆ. ಆ ಮೂಲಕ ಬಸವಣ್ಣನವರ ವ್ಯಕ್ತಿತ್ವಕ್ಕೆ ಚ್ಯುತಿಯಾಗಿದೆ. ಅಲ್ಲದೆ, ಲಿಂಗಾಯತರ ಭಾವನೆಗೆ ಧಕ್ಕೆ ತಂದಂತಾಗಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಅಸಮಾಧಾನ ವ್ಯಕ್ತಪಡಿಸಿದೆ.

‘ಬಸವೇಶ್ವರರ ಜಯಂತಿಯನ್ನು ದೇಶವಲ್ಲದೆ, ಜಗತ್ತಿನೆಲ್ಲೆಡೆ ಆಚರಿಸಲಾಗಿದೆ. ಗಣ್ಯಾತಿಗಣ್ಯರು ಬಸವೇಶ್ವರರ ಜನ್ಮದಿನಕ್ಕೆ ಶುಭ ಕೋರಿದ್ದಾರೆ. ಆದರೆ, ಬಸವಣ್ಣ ಎಂದರೆ ನಾಲ್ಕು ಕಾಲಿನ ಎತ್ತು ಎಂದು ತೋರಿಸುವ ಮೂಲಕ ಅವರ ಸಾಮಾಜಿಕ ಕ್ರಾಂತಿಗೆ ಮಸಿ ಬಳಿಯುವ ಹುನ್ನಾರದಂತೆ ಇದು ತೋರುತ್ತಿದೆ’ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಮಾದಾರ ದೂರಿದ್ದಾರೆ.

ಈ ತಪ್ಪಿಗೆ ಶಿವಶಂಕರಪ್ಪನವರು ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ADVERTISEMENT

ಬಸವ ಸಮಿತಿ ಒತ್ತಾಯ:‘ಶಾಮನೂರು ಶಿವಶಂಕರಪ್ಪನವರು ಬಸವೇಶ್ವರರ ಜಯಂತಿಯಂದು ಎತ್ತಿನ ಪೂಜೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ‘ಬಸವ (ನಂದೀಶ್ವರ) ಜಯಂತಿಯ ಶುಭಾಶಯಗಳು’ ಎಂದು ಹರಿಯಬಿಟ್ಟಿರುವುದರ ಬಗ್ಗೆ ಸ್ಪಷ್ಟನೆ ನೀಡಿ, ವಿಷಾದ ವ್ಯಕ್ತಪಡಿಸಬೇಕು’ ಎಂದು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.