ADVERTISEMENT

ಕಾರಟಗಿ: ಗಂಗೆಸ್ಥಳದ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:11 IST
Last Updated 2 ಸೆಪ್ಟೆಂಬರ್ 2025, 5:11 IST
ಕಾರಟಗಿಯಲ್ಲಿ ಶರಣಬಸವೇಶ್ವರ ಜಾತ್ರೆಯ ನಿಮಿತ್ತ ಗುರುವಾರ ನಡೆದ ಗಂಗೆಸ್ಥಳದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪಲ್ಲಕ್ಕಿ ಉತ್ಸವದಲ್ಲಿ ಪುರವಂತರು
ಕಾರಟಗಿಯಲ್ಲಿ ಶರಣಬಸವೇಶ್ವರ ಜಾತ್ರೆಯ ನಿಮಿತ್ತ ಗುರುವಾರ ನಡೆದ ಗಂಗೆಸ್ಥಳದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪಲ್ಲಕ್ಕಿ ಉತ್ಸವದಲ್ಲಿ ಪುರವಂತರು   

ಪ್ರಜಾವಾಣಿ ವಾರ್ತೆ

ಕಾರಟಗಿ: ಪಟ್ಟಣದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದಿರುವ 50ನೇ ವರ್ಷದ ಶರಣಬಸವೇಶ್ವರ ಪುರಾಣದ ಮಂಗಲ, ಜಾತ್ರೆಯ ನಿಮಿತ್ತ ಗುರುವಾರ ಗಂಗೆಸ್ಥಳಕ್ಕೆ ಹೋಗಿಬರುವ ಅದ್ದೂರಿಯ ಮೆರವಣಿಗೆಯು ಸಹಸ್ರಾರು ಭಕ್ತರ ಮಧ್ಯೆ ನಡೆಯಿತು.

ತುಂಗಭದ್ರಾ 31ನೇ ಕಾಲುವೆಯ ಬಳಿ ಹಿರೇಮಠದ ಮರುಳಸಿದ್ದಯ್ಯಸ್ವಾಮಿ ನೇತೃತ್ವದಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು.

ADVERTISEMENT

ಮೆರವಣಿಗೆಯಲ್ಲಿ ಪೂರ್ಣಕುಂಭ, ಕಳಸ ಹೊತ್ತ ಮಹಿಳೆಯರು, ಪಲ್ಲಕ್ಕಿ ಉತ್ಸವ, ವಿವಿಧ ವಾದ್ಯಮೇಳಗಳು, ನಂದಿಕೋಲು, ಶಸ್ತ್ರ ಹಾಕುವ ಪುರವಂತರು, ಝಾಂಜ್ ಮೇಳ, ಆಕರ್ಷಕ ನೃತ್ಯ, ಸ್ಥಳೀಯ ಮತ್ತು ಸಾಗರ, ಚಿತ್ರದುರ್ಗದಿಂದ ಬಂದಿದ್ದ ಪುರುಷರ, ಮಹಿಳೆಯರ ಆಕರ್ಷಕ ಡೊಳ್ಳುಕುಣಿತ, ಅನೇಕ ಕಲಾ ತಂಡಗಳು ಮೆರಗು ತಂದವು. ಡಿಜೆ ಅಬ್ಬರಕ್ಕೆ ಮೈನವಿರೇಳಿಸುವಂತೆ ಯುವಕರು, ಕುಣಿದು ಕುಪ್ಪಳಿಸಿದರು. ಸೇವಾಕಾಂಕ್ಷಿ ಮಹಿಳೆಯರು, ಪುರಾಣ ಸಮಿತಿ ಮುಖ್ಯಸ್ಥರು ಮೆರವಣಿಗೆಗೆ ಕಳೆ ಹೆಚ್ಚಿಸಿದ್ದರು.

ರಾಜ್ಯ ಹೆದ್ದಾರಿ ಮೂಲಕ ಸಾಗಿದ ಮೆರವಣಿಗೆಯು ಕನಕದಾಸ ವೃತ್ತ, ಸಾಲೋಣಿ ತಿರುವು, ಹಳೆಯ ಬಸ್‌ ನಿಲ್ದಾಣ, ಡಾ.ರಾಜಕುಮಾರ ಕಲಾ ಮಂದಿರದ ಮಾರ್ಗವಾಗಿ ದೇವಾಲಯ ತಲುಪಿತು.

ಬೆಳಿಗ್ಗೆ ಶರಣಬಸವೇಶ್ವರ, ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ಅರ್ಚನೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರಾದ ಮುತ್ತಯ್ಯಸ್ವಾಮಿ ಹಿರೇಮಠ, ಶಿವಪುತ್ರಯ್ಯಸ್ವಾಮಿ ಹಿರೇಮಠ ಮತ್ತವರ ಕುಟುಂಬದ ಸದಸ್ಯರಿಂದ ನಡೆದವು.

ಬೆಳಗಿನಿಂದಲೇ ನಾಗಕರಿಕರು, ಮಹಿಳೆಯರು ಕುಟುಂಬದ ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ಭಕ್ತಿಯನ್ನು ಸಮರ್ಪಿಸಿ, ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಮೆರೆದರು. ಮಧ್ಯಾಹ್ನದಿಂದ ಆರಂಭಗೊಂಡ ಅನ್ನಸಂತರ್ಪಣೆಯಲ್ಲಿ ಮಹಿಳೆಯರು, ನಾಗರಿಕರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪಟ್ಟಣ ಸಹಿತ ತಾಲ್ಲೂಕಿನ ವಿವಿಧ ಗ್ರಾಮಗಳ ಅಸಂಖ್ಯಾತ ಭಕ್ತರು ಜಾತಿ, ಮತ, ಲಿಂಗ ಭೇದವಿಲ್ಲದೇ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ರಾರಾಜಿಸಿದ ಪುನೀತ್‌ ಭಾವಚಿತ್ರ: ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಕೆಲ ಯುವಕರು ಕೈಯಲ್ಲಿ ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅವರ ಭಾವಚಿತ್ರ ಹಿಡಿದು ಪ್ರದರ್ಶಿಸಿದರು.

ತಂಪು ಪಾನೀಯ: ಸೋಮವಂಶ ಕ್ಷತ್ರಿಯ ಸಮಾಜದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ತಂಪುಪಾನೀಯ ವಿತರಿಸಿದರು.

ಮೆರವಣಿಗೆಯಿಂದ ಸುಗಮ ಸಂಚಾರ, ಶಾಂತಿ ಕಾಪಾಡಲು ಪೊಲೀಸ, ಸಂಚಾರ ಪೊಲೀಸ್, ಮೀಸಲು ಪಡೆ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಿದರು. ಮೆರವಣಿಗೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಪರ್ಯಾಯ ಮಾರ್ಗವಾಗಿ ಸ್ಥಳೀಯ ವಾಹನಗಳು ಸಂಚರಿಸಿದರೆ, ಪಟ್ಟಣದ ಹೊರಗೆ ಬೇರೆಡೆಯಿಂದ ಬಂದ ವಾಹನಗಳು ಸಾಲುಗಟ್ಟಿ ಕೆಲ ತಾಸುಗಳವರೆಗೆ ನಿಂತಿದ್ದವು.

ಇಂದು ರಥೋತ್ಸವ: ಶುಕ್ರವಾರ (ಸೆ.13) ಬೆಳಿಗ್ಗೆ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಮಡಿತೇರು ಎಳೆಯಲಾಗುವುದು. ಸಂಜೆ ಜೋಡಿ ರಥೋತ್ಸವವು ಶರಣಬಸವೇಶ್ವರರ ಬೆಳ್ಳಿಮೂರ್ತಿಯೊಂದಿಗೆ ನಡೆಯಲಿದೆ. 

ಮಹಿಳೆಯರ ಆಕರ್ಷಕ ಡೊಳ್ಳು ಕುಣಿತ
ನೆರೆದಿದ್ದ ಅಪಾರ ಜನಸ್ತೋಮ
ಪೂರ್ಣಕುಂಭ ಕಳಸ ಹೊತ್ತ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.