ADVERTISEMENT

ಪಕ್ಷ ನಿಷ್ಠೆಗೆ ಸಂದ ಗೌರವ: ಶರಣು ತಳ್ಳಿಕೇರಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 10:06 IST
Last Updated 25 ನವೆಂಬರ್ 2020, 10:06 IST
ಶರಣು ತಳ್ಳಿಕೇರಿ
ಶರಣು ತಳ್ಳಿಕೇರಿ   

ಕೊಪ್ಪಳ: ರೈತಪರ ಮತ್ತು ಅಭಿವೃದ್ಧಿ ವಿಷಯಾಧಾರಿ ಹೋರಾಟದಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಗುರುತಿಸಿಕೊಂಡ, ಕುಷ್ಟಗಿ ತಾಲ್ಲೂಕಿನ ಹನುಮನಾಳದ ಶರಣು ತಳ್ಳಿಕೇರಿ ಅವರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಎಲೆಕ್ಟ್ರಾನಿಕ್‌ ಕಮ್ಯೂನಿಕೇಷನ್ ಎಂಜಿನಿಯರಿಂಗ್ ಪದವಿ ಪಡೆದಿರುವ ಶರಣು ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದವರು. ಕೆಲ ಹಿರಿಯರ ವಿರೋಧದ ನಡುವೆಯೂ ಪಟ್ಟು ಬಿಡದೆ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು.

ಬಿಜೆಪಿಯಲ್ಲಿ ಯುವ ಕಾರ್ಯಕರ್ತರಾಗಿ, ನಂತರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ರಾಜಕೀಯ ಅಧಿಕಾರದ ಮೆಟ್ಟಿಲು ಏರಿದ್ದು, ಈ ಅವಧಿಯಲ್ಲಿ ಕೆಲ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಾಲ್ಲೂಕು ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಹೊಸತನ ತಂದು ಸಾರ್ವಜನಿಕ ಕೆಲಸಕಾರ್ಯಗಳು, ಸರ್ಕಾರದ ವಿವಿಧ ಯೋಜನೆಗಳು ಸಮರ್ಪಕ ಅನುಷ್ಟಾನಗೊಳ್ಳುವಲ್ಲಿ ಪ್ರಯತ್ನಿಸಿದ್ದರು.

ADVERTISEMENT

ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿ ಪಕ್ಷದ ಸಂಘಟನೆ ಶಕ್ತಿಯೂ ಆಗಿದ್ದ ಶರಣು ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ ರಾಜ್ಯ ಮಟ್ಟದ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಕಳೆದ ಎರಡು ದಶಕಗಳ ಅವಿರತ ಪಯಣ ತಮ್ಮನ್ನು ಇಲ್ಲಿಯವರೆಗೂ ಕರೆತಂದಿದೆ. ಹುದ್ದೆ ದೊಡ್ಡದಾಗಿದ್ದು ಕಷ್ಟವಾದರೂ ನಿಗಮಕ್ಕೆ ಹೊಸತನ ನೀಡುವ ನಿಟ್ಟಿನಲ್ಲಿ ಶ್ರಮಿಸುವ ಬಗ್ಗೆ ಶರಣು ತಳ್ಳಿಕೇರಿ 'ಪ್ರಜಾವಾಣಿ'ಯೊಂದಿಗೆ ಅನಿಸಿಕೆ ಹಂಚಿಕೊಂಡರು.

ಇದು ಪಕ್ಷ ನಿಷ್ಠೆಗೆ ಸಂದ ಗೌರವವಾಗಿದೆ. ಸಿದ್ದರಾಮಯ್ಯನವರ ಪ್ರಭಾವದ ನಡುವೆಯೂ ಕೊಪ್ಪಳ ಜಿಲ್ಲೆಯ ಕುರುಬ ಸಮಾಜದ ಯುವ ಮುಖಂಡರಾಗಿ ತಮ್ಮ ಛಾಪು ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.