
ಕಾರಟಗಿ: ಶಿವಮಾಲೆ ಧರಿಸಿದವರು ಅಪಚಾರ ಮಾಡದಿರಿ. ನಿಮ್ಮ ನಡೆ, ನುಡಿಯ ಬಗ್ಗೆ ಜನರ ಗಮನವಿರುತ್ತದೆ. ನಿಮ್ಮನ್ನು ಶಿವನ ಸ್ವರೂಪಿಗಳು ಎಂಬ ಭಾವ ಜನರಲ್ಲಿರುತ್ತದೆ. ಅದಕ್ಕೆ ತಕ್ಕಂತೆ ನಿಮ್ಮ ನಡತೆ, ಶುದ್ದ ಮನಸ್ಸು ಸದಾ ಇರಲಿ’ ಎಂದು ತಲೇಖಾನ ಮಠದ ವೀರಭದ್ರ ಶರಣ ಹೇಳಿದರು.
ಪಟ್ಟಣದ ಸರ್ವೋದಯ ವೇದಿಕೆಯು ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ 31ನೇ ವರ್ಷದ ಅರ್ಧ ಮಂಡಲದ ಶ್ರೀಶೈಲ ಶಿವದೀಕ್ಷೆಯ ಶಿವಮಾಲಾಧಾರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ವ್ಯಸನ, ಚಟಗಳನ್ನು ಮಾಲೆ ವಿರಮಣದ ಬಳಿಕವೂ ಶಾಸ್ವತವಾಗಿ ತ್ಯಜಿಸಿರಿ. ಜಪ, ಆಚರಣೆಯು ಶ್ರದ್ದೆ, ಭಕ್ತಿಯಿಂದ ಇರಲಿ. ಯಾವುದೇ ನಿರೀಕ್ಷೆ ಇರದೇ ಶ್ರದ್ದೆಯಿಂದ ಆಚರಿಸಿರಿ’ ಎಂದರು.
ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಮಾತನಾಡಿ, ‘ಶ್ರದ್ದೆಯಿಂದ ಮಾಲಾಧಾರಣೆಯ ಆಚರಣೆಯನ್ನು ಮಾಡಿರಿ. ನಿಮ್ಮ ಆಚರಣೆಯ ಜೊತೆಗೆ ನಿಮ್ಮ ಕಾಯಕದ ಬಗ್ಗೆ ಶ್ರದ್ದೆ ಇರಲಿ’ ಎಂದರು.
ಶರಣಬಸವೇಶ್ವರ ಪುರಾಣ ಸಮಿತಿಯ ಮುಖ್ಯಸ್ಥ ಕುಳಗಿ ಗುಂಡಪ್ಪ ಮಾತನಾಡಿದರು. ಉದ್ಯಮಿ ಕೆ.ನಾಗರಾಜ್, ವೇದಿಕೆ ಅಧ್ಯಕ್ಷ ನಾಗರಾಜ್ ಸಜ್ಜನ್, ಖಜಾಂಚಿ ಸೋಮನಾಥಸ್ವಾಮಿ ಗಣಾಚಾರಿ, ಕಾರ್ಯಾಧ್ಯಕ್ಷ ಬಸವರಾಜ ಕನಕಗಿರಿ, ಕಟಾಂಬ್ಲಿ ಮಲ್ಲಿಕಾರ್ಜುನ, ಅರ್ಚಕ ಮುತ್ತಯ್ಯಸ್ವಾಮಿ, ಶಿವಪುತ್ರಯ್ಯಸ್ವಾಮಿ ಉಪಸ್ಥಿತರಿದ್ದರು.
ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಅರ್ಚಕ ಮುತ್ತಯ್ಯಸ್ವಾಮಿ ನೇತೃತ್ವದಲ್ಲಿ ನಸುಕಿನ ಜಾವದಿಂದ ವಿಶೇಷ ಪೂಜೆ, ಅಲಂಕಾರ, ಅರ್ಚನೆ, ಅಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಶಿವಮಾಲಾಧಾರಣಾ ಕಾರ್ಯಕ್ರಮ ನಡೆಯಿತು.
ಶಿವಮಾಲಾಧಾರಿಗಳಿಗೆ ಭೋಜನದ ವ್ಯವಸ್ಥೆಯನ್ನು ಎಲ್‌ವಿಟಿ ಸಮೂಹ ಸಂಸ್ಥೆಯ ಕೆ.ಸೂಗಪ್ಪ ಮತ್ತು ಕೆ.ನಾಗಪ್ಪ ಮಕ್ಕಳು ಮಾಡಿದ್ದರು.
ಒಟ್ಟು 60 ಭಕ್ತರು ಶಿವಮಾಲಾಧಾರಣೆ ಮಾಡಿಕೊಂಡರು. ಡಾ. ಶರಣಪ್ಪ ಮಾವಿನಮಡುಗು ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.