
ಕೊಪ್ಪಳ: ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಗುರುವಾರ 848ನೇ ಸಿದ್ಧರಾಮೇಶ್ವರ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.
ಚಿತ್ರದುರ್ಗ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ‘ಭೋವಿ ಸಮಾಜದ ಯುವಜನತೆ ಒಳ್ಳೆಯ ಶಿಕ್ಷಣ ಪಡೆಯಬೇಕು, ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮಾಡಿಸಿ ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯ, ನಮ್ಮ ಕಸುಬು ನಮಗೆ ಇರಲಿ, ಮಕ್ಕಳ ಕನಸುಗಳಿಗೆ ಶಕ್ತಿ ತುಂಬುವ ಕೆಲಸವನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವೆಲ್ಲರೂ ಮಾಡಬೇಕಾಗಿದೆ’ ಎಂದರು.
ಸಮಾಜದ ಮುಖಂಡ ವೆಂಕಟೇಶ್ ಕಂಪಸಾಗರ ಮಾತನಾಡಿ ‘ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಮಹನೀಯರ ಚರಿತ್ರೆ ತಿಳಿಯಬೇಕು, ಅವರ ಮಾರ್ಗದರ್ಶನ ಹೇಗಿದ್ದವು, ಸಾಮಾಜಿಕ ಕಳಕಳಿ, 12ನೇ ಶತಮಾನದಲ್ಲಿ ಆದ ಬೆಳವಣಿಗೆಗಳು ಹೀಗೆ ಎಲ್ಲ ವಿಷಯಗಳ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಶಿಕ್ಷಣ ಅಗತ್ಯ’ ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮೊದಲು ಸಿದ್ಧರಾಮೇಶ್ವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು. ಕುಂಭ ಹೊತ್ತು ಮಹಿಳೆಯರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಮುಖಂಡ ಕೆ. ರಾಜಶೇಖರ ಹಿಟ್ನಾಳ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಓಬಳೇಶ್, ಮುಖಂಡರಾದ ದಸ್ತಗೀರ, ಯಮನೂರಪ್ಪ ವಡ್ಡರ್, ಲಕ್ಷ್ಮಯ್ಯ, ಮಾನ್ವಿ ನರಸಿಂಹಲು, ಹೈದರ್ ಅಲಿ, ಅಂಜನೇಯ, ಸರ್ವರ್ ಅಲಿ, ಪ್ರಾಧ್ಯಾಪಕ ಆರ್.ಎಚ್.ಜಂಗನವಾರಿ, ನಾಗರಾಜ ಪಟವಾರಿ, ರಮೇಶ ಇಡಿಗೇರ ವೈ, ಬಸವರಾಜ, ಪ್ರಕಾಶ್ ಅಗಳಕೇರಾ, ಅಕ್ಷಯ ವಡ್ಡರ್, ಹುಲಿಗೇಶ, ಲಂಗೇಶ್ ಪಾಲ್ಗೊಂಡಿದ್ದರು.
ಸಮಾಜದ ಸಂಘಟನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಲು ಸಿದ್ಧರಾಮೇಶ್ವರ (ಭೋವಿ) ವಡ್ಡರ ಕ್ಷೇಮಾಭಿವೃದ್ಧಿ ಸಂಘದವರು ಫೆ. 11ರಂದು ಬೆಳಿಗ್ಗೆ 11.30ಕ್ಕೆ ಇಲ್ಲಿನ ಗವಿಮಠದ ಹತ್ತಿರುವಿರುವ ಮಲಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಭೆ ಹಮ್ಮಿಕೊಂಡಿದ್ದಾರೆ. ಈ ಕುರಿತು ಚರ್ಚಿಸಲು ಇತ್ತೀಚೆಗೆ ಸಭೆ ನಡೆದಾಗ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಸಂಘಟನೆಗೆ ಒತ್ತು ಕೊಡಬೇಕು ಎನ್ನುವ ವಿಷಯ ಪ್ರಮುಖವಾಗಿ ಚರ್ಚೆಯಾಯಿತು. ಆದ್ದರಿಂದ ಸಭೆ ಕರೆಯಲು ನಿರ್ಧರಿಸಲಾಗಿದೆ. ಆದ್ದರಿಂದ ಸಭೆಗೆ ಸಮಾಜದ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಸುಣಗಾರ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.