ADVERTISEMENT

ಸಮಾಜದ ಸ್ವಾಸ್ಥ್ಯ ಕಾಪಾಡುವ ನಾಟಕಗಳು: ಪಾಪು ಕೊಡ್ಲಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 6:45 IST
Last Updated 15 ಡಿಸೆಂಬರ್ 2025, 6:45 IST
ಕುಕನೂರಿನಲ್ಲಿ ‘ನರಿಬುದ್ದಿ ನರಸವ್ವ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು  
ಕುಕನೂರಿನಲ್ಲಿ ‘ನರಿಬುದ್ದಿ ನರಸವ್ವ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು     

ಕುಕನೂರು: ‘ವಿದ್ಯುನ್ಮಾನ ಮಾಧ್ಯಮಗಳು ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ವಾಹಿನಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದರೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಕಂಪನಿಯ ಸಂಚಾಲಕ ಪಾಪು ಕೊಡ್ಲಿ ವಿಷಾದಿಸಿದರು.

ಇಲ್ಲಿನ ಎಸ್‌ಬಿಐ ಹಿಂದುಗಡೆ ಜಗದ್ಗುರು ರೇಣುಕಾಚಾರ್ಯ ನಾಟಕ ಸಂಘ ಮೈಂದರ್ಗಿ ಅವರು ಗುದ್ನೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿರುವ ‘ನರಿ ಬುದ್ಧಿ ನರಸವ್ವ’ ಎಂಬ ಸಾಮಾಜಿಕ ಹಾಗೂ ಕಾಮಿಡಿ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

‘ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹೊತ್ತಿರುವ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರವು ಯುವಕ ಯುವತಿಯರನ್ನು ದಾರಿ ತಪ್ಪಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ರಂಗಭೂಮಿಯು ಸಮಾಜದ ಕನ್ನಡಿ ಇದ್ದಂತೆ. ಯುವಕ ಯುವತಿಯರನ್ನು ಸಂಪ್ರದಾಯ, ಕಟ್ಟುಪಾಡುಗಳ ಪರಿಧಿಯಿಂದ ಹೊರ ತರುವುದು ಸಮೂಹ ಮಾಧ್ಯಮದ ಜವಾಬ್ದಾರಿ. ರಂಗ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನಾಟಕಕಾರರು ಸಮಾಜದ ಅಭಿವೃದ್ಧಿಗೆ ಪೂರಕವಾದ ನಾಟಕ ಪ್ರದರ್ಶಿಸಬೇಕು’ ಎಂದು ಸಲಹೆ ನೀಡಿದರು.

ಕಂಪನಿಯ ಮಾಲೀಕ ಎಂ.ಎಸ್ ಮಡ್ಡಿ ಮಾತನಾಡಿ, ‘ನಾಟಕ ಮತ್ತು ಜಾನಪದ ಕಲೆಗಳು ಸಮಾಜದಲ್ಲಿ ಬದಲಾವಣೆ ತರುತ್ತವೆ. ಜತೆಗೆ ಸಮಾಜ ತಿದ್ದುವ ಕೆಲಸ ಮಾಡುತ್ತವೆ. ಆದರೆ, ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ನಾಟಕಗಳು ಕೊಚ್ಚಿ ಹೋಗಿವೆ. ರಂಗಭೂಮಿ ಉಳಿಯಬೇಕದಾರೆ ಕಲಾ ರಸಿಕರು ನಾಟಕದ ಕಡೆ ಗಮನ ಹರಿಸಬೇಕು‘ ಎಂದು ಅಭಿಪ್ರಾಯಪಟ್ಟರು.

ನಟನೆ ಮೇಲೆ ಪ್ರೀತಿ ಕಾಳಜಿಯಿದ್ದರೆ ಮಾತ್ರ ಕಲಾವಿದರಾಗಲು ಸಾಧ್ಯ. ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು
-ಪಾಪು ಕೊಡ್ಲಿ, ಕಲಾವಿದ