ADVERTISEMENT

ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಕಳಪೆ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:15 IST
Last Updated 10 ಜೂನ್ 2025, 14:15 IST
ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ರೈತ ಸಂಘಟನೆಯು ವಿವಿಧ ಬೇಡಿಕೆ ಈಡೇರಿಸುವಂತೆ ತಹಶೀಲ್ದಾರ್ ಪ್ರಾಣೇಶ್ ಎಚ್ ಅವರಿಗೆ ಮನವಿ ಸಲ್ಲಿಸಿದರು
ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ರೈತ ಸಂಘಟನೆಯು ವಿವಿಧ ಬೇಡಿಕೆ ಈಡೇರಿಸುವಂತೆ ತಹಶೀಲ್ದಾರ್ ಪ್ರಾಣೇಶ್ ಎಚ್ ಅವರಿಗೆ ಮನವಿ ಸಲ್ಲಿಸಿದರು   

ಕುಕನೂರು: ಪಟ್ಟಣ ಪಂಚಾಯಿತಿ ನಿರ್ವಹಣೆಯ ಮೂಲಕ ₹ 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಕಳಪೆ ಆಗಿದೆ. ಜಿಲ್ಲಾಧಿಕಾರಿ ಮತ್ತು ಶಾಸಕರು ಇತ್ತ ಗಮನ ಹರಿಸುವ ಮೂಲಕ ಕ್ರಮಕೈಕೊಳ್ಳಬೇಕು ಎಂದು ರೈತ ಸಂಘ ಮನವಿ ಮಾಡಿದೆ. ಬಳಿಕ ಪಟ್ಟಣದಲ್ಲಿ ಮಂಗಳವಾರ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ, ‘ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣ ಆಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಈ ಕುರಿತಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕಾಮಗಾರಿಯಲ್ಲಿ ಗುಣಮಟ್ಟ ಕಾಣುತ್ತಿಲ್ಲ. ಶಾಸಕ ಬಸವರಾಜ ರಾಯರಡ್ಡಿ ಮತ್ತು ಜಿಲ್ಲೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸಬೇಕು’ ಎಂದು ಮನವಿ ಮಾಡಿದರು.

ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಗಂಗಮ್ಮ ಹುಡೇದ್ ಮಾತನಾಡಿ, ‘ಪಟ್ಟಣದ ಎಪಿಎಂಸಿ ಹೆಸರಿಗೆ ಮಾತ್ರವಿದೆ. ಅಲ್ಲಿ ರೈತರ ಬೆಳೆಗಳ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಎಪಿಎಂಸಿ ಆವರಣದಲ್ಲಿ ಟೆಂಡರ್ ಪ್ರಕ್ರಿಯೆ ಮೂಲಕ ಬೆಳೆಗಳ ಖರೀದಿ ಕೇಂದ್ರ ಸ್ಥಾಪಿಸಬೇಕು. ಮುಂಬರುವ ಮೆಕ್ಕೆಜೋಳ, ಹೆಸರು ಬೆಳೆಗಳು ಸೇರಿದಂತೆ ಇತರ ಎಲ್ಲ ಬೆಳೆಗಳಿಗೆ ಅವಧಿಗೂ ಮುನ್ನವೇ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು’ ಎಂದು ಹೇಳಿದರು.

ADVERTISEMENT

ಈಶಪ್ಪ ಸಬರದ, ಸಯ್ಯದ್ ಸಾಬ್ ಮುಲ್ಲಾ, ಶಿವು ಭಂಗಿ, ಹನುಮಪ್ಪ, ಮಲ್ಲಪ್ಪ ಚಳ್ಳಮರದ, ಫಕೀರಪ್ಪ ಯಡ್ಡೋಣಿ, ಶರಣಪ್ಪ ಚೆಂಡೂರು, ಶರಣಪ್ಪ ದಿವಟರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.