ADVERTISEMENT

ಕೊಪ್ಪಳ: ದೈಹಿಕ ಶಿಕ್ಷಣ ಶಿಕ್ಷಕರಿಗೆ ‘ಆಟ’ದ ಪಾಠ

ಹೊಸ ವಿಷಯಗಳ ಬಗ್ಗೆ ತರಬೇತುದಾರರಿಗೆ ಮಾಹಿತಿ ಒದಗಿಸಲು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:43 IST
Last Updated 11 ಡಿಸೆಂಬರ್ 2025, 6:43 IST
<div class="paragraphs"><p>ಕೊಪ್ಪಳದಲ್ಲಿ ಬುಧವಾರ ದೈಹಿಕ ಶಿಕ್ಷಣ ಶಿಕ್ಷಕರಿಗೆ ನಡೆದ ಕಾರ್ಯಾಗಾರದ ನೋಟ</p></div>

ಕೊಪ್ಪಳದಲ್ಲಿ ಬುಧವಾರ ದೈಹಿಕ ಶಿಕ್ಷಣ ಶಿಕ್ಷಕರಿಗೆ ನಡೆದ ಕಾರ್ಯಾಗಾರದ ನೋಟ

   

ಕೊಪ್ಪಳ: ಒಬ್ಬ ಉತ್ತಮ ಕ್ರೀಡಾಪಟು ರೂಪುಕೊಳ್ಳುವುದೇ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಿಂದ. ಅಲ್ಲಿ ಕ್ರೀಡಾ ನಿಯಮಗಳ ಬಗ್ಗೆ ತಿಳಿಸಿಕೊಡುವ ಜೊತೆಗೆ ಆಟದ ಕೌಶಲಗಳನ್ನೂ ಕಲಿಸುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಈಗ ಜಿಲ್ಲಾಕೇಂದ್ರದಲ್ಲಿ ‘ಪಾಠ‘ ನಡೆಯುತ್ತಿದೆ.

ದಿನಗಳು ಉರುಳಿದಂತೆ ವಿವಿಧ ಕ್ರೀಡೆಗಳಲ್ಲಿ ಸದಾ ಒಂದಿಲ್ಲೊಂದು ಹೊಸ ನಿಮಯಗಳು ಜಾರಿಗೆ ಬರುತ್ತಲೇ ಇವೆ. ಸ್ಪರ್ಧಾತ್ಮಕ ಕ್ರೀಡಾ ಜಗತ್ತಿನಲ್ಲಿ ನಿರಂತರವಾಗಿ ಹೊಸ ವಿಷಯಗಳ ಕಲಿಕೆ ಇದ್ದೇ ಇರುತ್ತದೆ. ಅವುಗಳ ಬಗ್ಗೆ ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳಿಕೊಟ್ಟು ಅವರನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಣಿಯಾಗುವಂತೆ ಮಾಡಲು ತರಬೇತಿ ನೀಡಲಾಗುತ್ತಿದೆ. ಆದ್ದರಿಂದ ಇಲ್ಲಿನ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮೂಲಕ ಮೊದಲ ಬಾರಿಗೆ ತರಬೇತಿ ಆಯೋಜನೆಯಾಗಿದ್ದು ನಿರ್ದಿಷ್ಟವಾಗಿ ಮೂರು ಕ್ರೀಡೆಗಳ ಬಗ್ಗೆ  ತರಗತಿಯಲ್ಲಿ ಪಾಠ ಮತ್ತು ಮೈದಾನದಲ್ಲಿ ಪ್ರಾಯೋಗಿಕ ಅನುಭವವನ್ನು ಶಿಕ್ಷಕರಿಗೆ ಒದಗಿಸಲಾಗುತ್ತಿದೆ.

ADVERTISEMENT

ಈ ಕಾರ್ಯಾಗಾರದ ಭಾಗವಾಗಿ ಮೊದಲ ದಿನವಾದ ಬುಧವಾರ ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 60 ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡಿದ್ದರು. ಅವರಿಗೆ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಿಂದ ಕಲಿತ ಕ್ರೀಡಾ ಇಲಾಖೆಯ ಅನುಭವಿ ತರಬೇತುದಾರ ಯತಿರಾಜ್‌ ಕೊಕ್ಕೊ  ಬಗ್ಗೆ, ಚೆಸ್‌ ಕ್ರೀಡೆ ಬಗ್ಗೆ ಮರಿಸ್ವಾಮಿ ಮತ್ತು ನಾಗರಾಜ ಪಾಟೀಲ ಆಟದ ಹೊಸ ‘ಪಾಠ’ಗಳನ್ನು ಹೇಳಿಕೊಟ್ಟಿದ್ದಾರೆ. ಗುರುವಾರ ಫುಟ್‌ಬಾಲ್‌ ಕೌಶಲಗಳ ಬಗ್ಗೆ ಮತ್ತೊಬ್ಬ ಕೋಚ್‌ ತಿಳಿಸಿಕೊಡುವರು.

ಜಿಲ್ಲೆಯಲ್ಲಿ ಸುಮಾರು 200 ದೈಹಿಕ ಶಿಕ್ಷಣ ಶಿಕ್ಷಕರು ಇದ್ದರೂ 60 ಜನ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು, ಹಲವರು ನಿವೃತ್ತಿ ಅಂಚಿನಲ್ಲಿ, ಇನ್ನೂ ಕೆಲವರು ರಜೆಯ ಮೇಲೆ ಮತ್ತು ಇನ್ನಷ್ಟು ಜನ ಶಾಲೆಯ ಮುಖ್ಯೋಪಾಧ್ಯಾಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಪುನರ್‌ ಮನನ ಕಾರ್ಯಕ್ರಮ ನಡೆಸಿ ಕ್ರೀಡೆಯ ಹೊಸ ವಿಷಯಗಳನ್ನು ಪ್ರತಿವರ್ಷವೂ ತಿಳಿಸಿಕೊಡಲಾಗುತ್ತಿತ್ತು. ಆದರೆ ಈ ಸಲ ಕ್ರೀಡಾ ಇಲಾಖೆಯ ಅನುಭವಿ ಕೋಚ್‌ಗಳಿಂದಲೇ ಹೊಸ ನಿಯಮಗಳು, ಕ್ರೀಡೆಯ ಮಹತ್ವ ಹಾಗೂ ಪ್ರಾಯೋಗಿಕ ಅನುಷ್ಠಾನದ ಬಗ್ಗೆ ಕೋಚ್‌ಗಳು ಪಾಠ ಮಾಡುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಮಕ್ಕಳು ಫುಟ್‌ಬಾಲ್‌ ಸೇರಿದಂತೆ ಎಲ್ಲ ಕ್ರೀಡೆಗಳಲ್ಲಿ ಒಲವು ತೋರಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳಿಗೆ ಪರಿಣಾಮಕಾರಿಯಾಗಿ ಕ್ರೀಡೆಯ ಮಹತ್ವ ಮನವರಿಕೆ ಮಾಡಿಕೊಡಲು ಕಾರ್ಯಾಗಾರ ನಡೆಸಲಾಗಿದೆ.
ವಿಠ್ಠಲ ಜಾಬಗೌಡರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.