ಕೊಪ್ಪಳ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಲಭಿಸಿದ ಸರಾಸರಿ ಫಲಿತಾಂಶಕ್ಕಿಂತಲೂ ಕಡಿಮೆ ಸಾಧನೆ ಮಾಡಿದ 132 ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 207 ಶಾಲೆಗಳ ಮುಖ್ಯಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಮೂರು ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆ ಅಗ್ರಸ್ಥಾನ ಮತ್ತು ರಾಜ್ಯಮಟ್ಟದಲ್ಲಿ 16ನೇ ಸ್ಥಾನ ಪಡೆದುಕೊಂಡಿತ್ತು. ಎರಡು ವರ್ಷಗಳ ಹಿಂದೆ ಶೇ 66.16ರಷ್ಟು ಫಲಿತಾಂಶ ಪಡೆದು 16ರಿಂದ 32ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಇತ್ತೀಚೆಗೆ ಪ್ರಕಟವಾದ ಫಲಿತಾಂಶದಲ್ಲಿ ಜಿಲ್ಲೆಗೆ ಶೇ 56.57ರಷ್ಟು ಮಾತ್ರ ಫಲಿತಾಂಶ ಬಂದಿದೆ. ಆದ್ದರಿಂದ ಇದಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಲಾಗಿದ್ದು, ಫಲಿತಾಂಶ ಹಿಂದುಳಿಯಲು ಕಾರಣಗಳು ಏನು? ಶಿಕ್ಷಕರ ಹೊಣೆಗಾರಿಕೆ ಏನು? ಸುಧಾರಣೆ ಏಕೆ ಆಗಿಲ್ಲ? ಎನ್ನುವ ಮಾಹಿತಿ ಒದಗಿಸಲು ಸೂಚಿಸಲಾಗಿದೆ.
ಗಂಗಾವತಿ 107, ಕೊಪ್ಪಳ 85, ಕುಷ್ಟಗಿ 65 ಮತ್ತು ಯಲಬುರ್ಗಾ ಶೈಕ್ಷಣಿಕ ತಾಲ್ಲೂಕುಗಳಲ್ಲಿ 85 ಸೇರಿದಂತೆ ಒಟ್ಟು 342 ಪ್ರೌಢಶಾಲೆಗಳು ಜಿಲ್ಲೆಯಲ್ಲಿವೆ. ಇದರಲ್ಲಿ 219 ಸರ್ಕಾರಿ, 32 ಅನುದಾನಿತ ಮತ್ತು 91 ಅನುದಾನ ರಹಿತ ಶಾಲೆಗಳಿದ್ದು, ಸರ್ಕಾರಿ ಶಾಲೆಗಳಲ್ಲಿಯೇ ಫಲಿತಾಂಶ ತೀವ್ರ ಕುಸಿತವಾಗಿದೆ. ಶೇ 57ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಪೈಕಿ 92 ಶಾಲೆಗಳು ಶೇ 40ಕ್ಕಿಂತಲೂ ಕಡಿಮೆ ಫಲಿತಾಂಶ ಗಳಿಸಿವೆ. ಮಕ್ಕಳ ಓದಿನ ಗುಣಮಟ್ಟ, ಶಿಕ್ಷಕರ ಬೋಧನಾ ಸಾಮರ್ಥ್ಯ, ಶಾಲೆಯ ವಾತಾವರಣ, ವಿದ್ಯಾರ್ಥಿಗಳು ನಿಯಮಿತ ಶಾಲೆಗೆ ಬರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಶೇ 40ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಗಂಗಾವತಿ ಶೈಕ್ಷಣಿಕ ತಾಲ್ಲೂಕಿನಲ್ಲಿ 14 ಸರ್ಕಾರಿ, ಮೂರು ಅನುದಾನಿತ ಮತ್ತು ಎಂಟು ಅನುದಾನ ರಹಿತ ಸೇರಿ ಒಟ್ಟು 25 ಶಾಲೆಗಳಿವೆ.
ಕೊಪ್ಪಳ ತಾಲ್ಲೂಕಿನಲ್ಲಿ 29, ಕುಷ್ಟಗಿ ತಾಲ್ಲೂಕಿನಲ್ಲಿ 17 ಮತ್ತು ಈ ಸಲದ ಎಸ್‌ಎಸ್ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಅಗ್ರಸ್ಥಾನ ಗಳಿಸಿರುವ ಯಲಬುರ್ಗಾ ಶೈಕ್ಷಣಿಕ ತಾಲ್ಲೂಕಿನಲ್ಲಿ 21 ಶಾಲೆಗಳಲ್ಲಿ ಶೇ 40ಕ್ಕಿಂತಲೂ ಕಡಿಮೆ ಫಲಿತಾಂಶ ಬಂದಿವೆ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಫಲಿತಾಂಶ ಸುಧಾರಣೆಗೆ ಕ್ರಮಕೈಗೊಳ್ಳುವ ಬಗ್ಗೆ ಸಮಾಲೋಚಿಸುವ ಭಾಗವಾಗಿಯೂ ಈ ನೋಟಿಸ್ ನೀಡಲಾಗಿದೆ. ನೋಟಿಸ್ ಪ್ರತಿಯಾಗಿ ಮುಖ್ಯಶಿಕ್ಷಕರಿಂದ ಬರುವ ಉತ್ತರಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
‘ಶಾಲೆಗಳು ಪೂರ್ಣಾವಧಿ ನಡೆಯುವುದಿಲ್ಲ’
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಫಲಿತಾಂಶ ಕುಸಿತವಾಗಿರುವುದಕ್ಕೆ ಹಲವರು ಅನೇಕ ಕಾರಣಗಳನ್ನು ನೀಡುತ್ತಿದ್ದಾರೆ. ಹೆಸರು ಹೇಳಲು ಬಯಸದ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ ‘ಸರ್ಕಾರದ ನಿಯಮದ ಪ್ರಕಾರ ವಾರ್ಷಿಕವಾಗಿ 220 ದಿನ ಶಾಲೆ ನಡೆಯಬೇಕು. ಸರ್ಕಾರ ವಿವಿಧ ಇಲಾಖೆಗಳು ಮತ್ತು ಸ್ಥಳೀಯ ಆಡಳಿತದ ಕಾರ್ಯಕ್ರಮಗಳಿಗೆ ಬಹಳಷ್ಟು ಸಮಯ ವ್ಯರ್ಥವಾಗುತ್ತಿದೆ. ಹೀಗಾಗಿ ಅನೇಕ ಬಾರಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳೇ ನಡೆಯುದಿಲ್ಲ’ ಎಂದರು. ‘ಮೂಲವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಬುನಾದಿ ಗಟ್ಟಿಯಾಗಿ ಇಲ್ಲದಿರುವುದು ಫಲಿತಾಂಶ ಕಡಿಮೆಯಾಗಲು ಕಾರಣ. ಪ್ರತಿಭಾವಂತರೂ ಇದೇ ಜಿಲ್ಲೆಯಲ್ಲಿ ಓದಿ ಅವಕಾಶ ಹುಡುಕಿಕೊಂಡು ಬೇರೆ ಕಡೆ ವಲಸೆ ಹೋಗುತ್ತಾರೆ. ಇದೇ ದೊಡ್ಡ ಸಮಸ್ಯೆಯಾಗಿದೆ’ ಎಂದು ಹೇಳಿದರು.
ಶೇ 57ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ 207 ಶಾಲೆಗಳಿಗೆ ನೋಟಿಸ್ ನೀಡಲಾಗಿದ್ದು ಕೆಲವು ಶಾಲೆಗಳಿಂದ ಉತ್ತರವೂ ಬಂದಿವೆ. ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು– ಶ್ರೀಶೈಲ ಬಿರಾದಾರ, ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.