
ಗಂಗಾವತಿ: ‘ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಅಗತ್ಯವಾಗಿ ಬೇಕಾಗಿದೆ. ಈ ಕುರಿತು ಬಿಜೆಪಿ ಹೈಕಮಾಂಡ್, ಕೇಂದ್ರ ಸರ್ಕಾರದ ಸಚಿವರ ಜೊತೆ ಮಾತನಾಡಲಾಗುತ್ತಿದೆ’ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದರು.
ನಗರದ ಕನಕದಾಸರ ವೃತ್ತದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕನಕದಾಸರು ಆಧ್ಯಾತ್ಮದ ಮೂಲಕ ಶ್ರೀಕೃಷ್ಣನನ್ನು ಒಲಿಸಿಕೊಂಡಿದ್ದು, ದಾಸ ಸಾಹಿತ್ಯದ ಮೂಲಕ ಸಮಾಜದ ಅಂಕು–ಡೊಂಕು ತಿದ್ದುವ ಕಾರ್ಯ ಮಾಡಿದ್ದಾರೆ. ಕುರುಬ ಸಮಾಜದಲ್ಲಿ ಕನಕದಾಸರು ಜನಿಸಿದರೂ, ಮಾನವ ಕುಲಕ್ಕೆ ನೈತಿಕ ಪಾಠ, ದಾಸ ಸಾಹಿತ್ಯದ ಮೂಲಕ ಮನವರಿಕೆ ಮಾಡಿದ್ದಾರೆ ಎಂದರು.
‘ಹಲವು ದಶಕಗಳಿಂದ ಎಸ್‌ಟಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು, ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ರಾಜ್ಯದಿಂದ ಎಸ್‌ಟಿ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಕೆಲ ಮಾಹಿತಿಗಾಗಿ ಪುನಃ ಕಡತವನ್ನು ರಾಜ್ಯಕ್ಕೆ ಕಳುಹಿಸಿರುವ ಮಾಹಿತಿ ಇದೆ. ಅಗತ್ಯ ಮಾಹಿತಿಗಳೊಂದಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳಿಸುವ ಪ್ರಕ್ರಿಯೆ ನಡೆಸಬೇಕು’ ಎಂದರು.
ಮಾಜಿ ಸಂಸದ ಶಿವರಾಮೆಗೌಡ ಮಾತನಾಡಿ, ‘ಕುರುಬ ಜನಾಂಗ ಎಸ್ಟಿ ಮೀಸಲಾತಿ ಪಡೆಯಲು ಎಲ್ಲ ಅರ್ಹತೆ ಹೊಂದಿದೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸಹ ಹೊಸಪೇಟೆ ಕಾರ್ಯಕ್ರಮದಲ್ಲಿ ಒಪ್ಪಿದ್ದು, 2ಎ ದಲ್ಲಿರುವ ಮೀಸಲಾತಿಯನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕು. ಇದರಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಲಭಿಸುತ್ತದೆ’ ಎಂದರು.
ಮಾಜಿ ಎಂಎಲ್‌ಸಿ ಎಚ್.ಆರ್.ಶ್ರೀನಾಥ ಮಾತನಾಡಿದರು. ಮಹಾಲಕ್ಷ್ಮಿ ಕುರಿ ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಎಂಬಿಬಿಎಸ್ ಸರ್ಕಾರಿ ಸೀಟು ಪಡೆದ ಕುರುಬ ಸಮಾಜದ ಪ್ರತಿಭಾನ್ವಿತರನ್ನು ಹಾಗೂ ದೆಹಲಿ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಪ್ರೊ.ಶಿವರಾಜ್ ಗುರುಕಾರ ಅವರನ್ನು ಸನ್ಮಾನಿಸಲಾಯಿತು.
ಸಿದ್ದಯ್ಯ, ಸಿದ್ದರಾಮಯ್ಯ ಗುರುವೀನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ, ಆನೆಗೊಂದಿ ರಾಜವಂಸ್ಥೆ ಲಲಿತರಾಣಿ ಶ್ರೀರಂಗ ದೇವರಾಯಲು, ನಗರಸಭೆ ಮಾಜಿ ಸದಸ್ಯ ಎಫ್. ರಾಘವೇಂದ್ರ, ರಮೇಶ ಚೌಡ್ಕಿ, ಮೌಲಸಾಬ, ರೈತ ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಪಾಟೀಲ, ಪೌರಾಯುಕ್ತ ಆರ್.ವಿ ರೂಪಾಕ್ಷಮೂರ್ತಿ, ಪಿಐ ಪ್ರಕಾಶ ಮಾಳೆ, ದೈಹಿಕ ಶಿಕ್ಷಣಾಧಿಕಾರಿ ಸರಸ್ವತಿ ಜೂಡಿ, ಕನಕದಾಸ ಕುರುಬ ಸಂಘದ ತಾಲ್ಲೂಕು ಅಧ್ಯಕ್ಷ ವಿಠಲಾಪೂರ ಯಮನಪ್ಪ, ನಗರಾಧ್ಯಕ್ಷ ಕೆ.ನಾಗೇಶಪ್ಪ, ಕಸಾಪ ತಾಲ್ಲೂಕು ಅಧ್ಯಕ್ಷ ರುದ್ರೇಶ ಮಡಿವಾಳ, ಕುರುಬ ಸಮಾಜದ ಮುಖಂಡ ಮೋರಿ ದುರುಗಪ್ಪ, ಸಿದ್ದಲಿಂಗನಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.