ADVERTISEMENT

ನೆಟ್‌ಬಾಲ್‌ ಕ್ರೀಡಾಕೂಟ: ಕೊಪ್ಪಳಕ್ಕೆ ಮೊದಲ ಬಾರಿಗೆ ಆತಿಥ್ಯದ ಸವಿ

ಪ್ರಮೋದ
Published 11 ನವೆಂಬರ್ 2023, 5:04 IST
Last Updated 11 ನವೆಂಬರ್ 2023, 5:04 IST
ನೆಟ್‌ಬಾಲ್‌ ಟೂರ್ನಿಯ ತುಮಕೂರು (ಹಳದಿ ಪೋಷಾಕರು) ಹಾಗೂ ಬೆಂಗಳೂರು (ನೀಲಿ) ಬಾಲಕಿಯರ ತಂಡಗಳ ನಡುವಿನ ಪೈಪೋಟಿಯ ಚಿತ್ರಣ
ನೆಟ್‌ಬಾಲ್‌ ಟೂರ್ನಿಯ ತುಮಕೂರು (ಹಳದಿ ಪೋಷಾಕರು) ಹಾಗೂ ಬೆಂಗಳೂರು (ನೀಲಿ) ಬಾಲಕಿಯರ ತಂಡಗಳ ನಡುವಿನ ಪೈಪೋಟಿಯ ಚಿತ್ರಣ   

ಕೊಪ್ಪಳ: ಮೊದಲಾದರೆ ರಾಜ್ಯಮಟ್ಟದ ಶಾಲಾ, ಕಾಲೇಜುಗಳ ಕ್ರೀಡಾಕೂಟಗಳನ್ನಾಡಲು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡದಂಥ ಮುಂದುವರಿದ ಎರಡನೇ ದರ್ಜೆಯ ನಗರಗಳಿಗೆ ಇಲ್ಲಿನ ಕ್ರೀಡಾಪಟುಗಳು ಹೋಗಬೇಕಾಗುತ್ತಿತ್ತು. ಈಗ ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾಪುಟಗಳು ಇಲ್ಲಿಗೆ ಬಂದಿದ್ದು, ಜಿಲ್ಲೆಯಲ್ಲಿ ನೆಟ್‌ಬಾಲ್‌ ಕ್ರೀಡಾ ಪರಿಚಯಕ್ಕೆ ಈ ಟೂರ್ನಿ ವೇದಿಕೆಯಾಗಲಿದೆ.

ಜಿಲ್ಲೆಯ ಮಟ್ಟಿಗೆ ಜಂಪ್‌ರೋಪ್‌ ಮತ್ತು ಸಿಲಂಬಬ್‌ (ದೊಣ್ಣೆವರಸೆ) ಕ್ರೀಡೆಗಳು ಹೊಸತೇನಲ್ಲ. ಇದುವರೆಗೆ ಒಟ್ಟು ಒಂಬತ್ತು ಬಾರಿ ಜಂಪ್‌ರೋಪ್‌ ಕ್ರೀಡೆಯ ರಾಜ್ಯಮಟ್ಟದ ಟೂರ್ನಿಗಳು ನಡೆದಿದ್ದು, ಇದರಲ್ಲಿ ನಾಲ್ಕು ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿ ಮತ್ತು ಎರಡು ಗಂಗಾವತಿಯಲ್ಲಿ ಜರುಗಿವೆ. ದೊಣ್ಣೆವರಸೆಯ ರಾಜ್ಯಮಟ್ಟದ ಟೂರ್ನಿಗಳು ಒಟ್ಟು ಎಂಟು ಸಲ ಜರುಗಿದ್ದು, ಐದು ಸಲ ಇದೇ ಜಿಲ್ಲೆಯಲ್ಲಿ ಆಯೋಜನೆಯಾಗಿದ್ದವು. ಎರಡು ಸಲ ಗಂಗಾವತಿ ಮತ್ತು ಮೂರು ಸಲ ಹನುಮಸಾಗರದಲ್ಲಿ ನಡೆದಿದ್ದವು. ಹೀಗಾಗಿ ಈ ಎರಡೂ ಕ್ರೀಡೆಗಳ ಸಾಧನೆಯಿಂದಲೇ ಕೊಪ್ಪಳ ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ.

ಇವುಗಳನ್ನು ಹೊರತುಪಡಿಸಿ ಬೇರೆ ಕ್ರೀಡೆಗಳು ಜಿಲ್ಲೆಯಲ್ಲಿ ಅಷ್ಟಕ್ಕಷ್ಟೇ. ಹುಲಗಿ ಜಾತ್ರೆ ಮತ್ತು ಹಲವು ಆಹ್ವಾನಿತ ಟೂರ್ನಿಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಂಡಗಳನ್ನು ಕರೆಯಿಸಿ ಸಂಘಟಕರು ಟೂರ್ನಿ ನಡೆಸುತ್ತಾರೆ. ಆದರೆ, ಪದವಿಪೂರ್ವ ಕಾಲೇಜು ಹಂತದ ಮಹತ್ವದ ಟೂರ್ನಿ ಮೊದಲ ಬಾರಿಗೆ ಇಲ್ಲಿ ಆಯೋಜನೆಯಾಗಿದೆ.

ADVERTISEMENT

ರಾಜ್ಯದ ಎಲ್ಲಾ ಭಾಗಗಳ ಜಿಲ್ಲೆಗಳಲ್ಲಿ ಒಂದೊಂದು ಪದವಿಪೂರ್ವ ಹಂತದ ಕ್ರೀಡೆಗಳನ್ನು ನಡೆಸಬೇಕು ಎನ್ನುವ ಕಾರಣಕ್ಕಾಗಿ ಪಿಯು ಮಂಡಳಿ ರಾಜ್ಯದ ಬೇರೆ ಬೇರೆ ಕಡೆ ಒಂದೊಂದು ಕ್ರೀಡೆಯನ್ನು ನಡೆಸುತ್ತಿದೆ. ಅದರಂತೆ ಇಲ್ಲಿಗೆ ಸಮೀಪದ ಕಿಡದಾಳದಲ್ಲಿರುವ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಎರಡು ದಿನಗಳ ಕ್ರೀಡಾಕೂಟ ಆಯೋಜನೆಯಾಗಿದೆ.

ಬೆಂಗಳೂರು, ಕೋಲಾರ, ಮೈಸೂರು, ವಿಜಯಪುರ, ಕಲಬುರಗಿ, ಯಾದಗಿರಿ, ಉಡುಪಿ ಹೀಗೆ ವಿವಿಧ ಜಿಲ್ಲೆಗಳಿಂದ ಬಾಲಕ ವಿಭಾಗದಲ್ಲಿ 23 ಮತ್ತು ಬಾಲಕಿಯರ ವಿಭಾಗದಲ್ಲಿ 19 ತಂಡಗಳು ಪಾಲ್ಗೊಂಡಿವೆ. ತವರಿನ ಎರಡೂ ವಿಭಾಗದ ತಂಡಗಳಿವೆ. ಎರಡೂ ವಿಭಾಗಗಳ ಕ್ರೀಡಾಪಟುಗಳು ಮತ್ತು ಸಿಬ್ಬಂದಿ ಸೇರಿ 400ಕ್ಕೂ ಹೆಚ್ಚು ಜನ ಇದ್ದಾರೆ.

ಜಿಲ್ಲೆಯ ಮಟ್ಟಿಗೆ ಹೊಸದಾದ ಈ ಕ್ರೀಡೆಯನ್ನು ಹೇಗೆ ಆಡುತ್ತಾರೆ? ಆಟದ ನಿಯಮಗಳು ಏನು? ಎನ್ನುವ ಕುತೂಹಲದಿಂದ ಶಾರದಾ ಶಾಲೆಯ ಬೇರೆ ಬೇರೆ ವಿಭಾಗಗಳ ವಿದ್ಯಾರ್ಥಿಗಳು ಕೂಡ ಕುತೂಹಲದಿಂದ ಪಂದ್ಯಗಳನ್ನು ವೀಕ್ಷಿಸಿದರು.  ಟೂರ್ನಿಯನ್ನು ಸುಸೂತ್ರವಾಗಿ ನಡೆಸಲು ಹೊರ ಜಿಲ್ಲೆಗಳಿಂದಲೂ ರೆಫರಿಗಳನ್ನು ಕರೆಯಿಸಲಾಗಿದೆ.

ಟೂರ್ನಿ ಬಗ್ಗೆ ಮಾತನಾಡಿದ ಕೊಪ್ಪಳ ಜಿಲ್ಲಾ ಬಾಲಕಿಯರ ತಂಡ ಪ್ರತಿನಿಧಿಸಿರುವ ಗಂಗಾವತಿಯ ವೈಜೆಆರ್‌ ಕಾಲೇಜಿನ ಕ್ರೀಡಾಪಟುಗಳು,‘ನಾವು ಬೇರೆ ಬೇರೆ ಕಡೆ ಹೋಗಿ ನೆಟ್‌ಬಾಲ್‌ ಟೂರ್ನಿಗಳನ್ನು ಆಡುತ್ತಿದ್ದೆವು. ಮೊದಲ ಬಾರಿಗೆ ಜಿಲ್ಲೆಯಲ್ಲಿಯೇ ರಾಜ್ಯಮಟ್ಟದ ಟೂರ್ನಿ ಆಯೋಜನೆಯಾಗಿದ್ದರಿಂದ ಇಲ್ಲಿನ ಜನರಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಯಲು, ಬಲಿಷ್ಠ ತಂಡದವರು ಆಡುವ ಕೌಶಲವನ್ನು ಕಲಿತುಕೊಳ್ಳಲು ವೇದಿಕೆ ಲಭಿಸಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಚೊಚ್ಚಲ ಪಂದ್ಯದಲ್ಲಿ ಮೈಸೂರು ತಂಡದ ಎದುರು ಗೆಲುವು ಪಡೆದವು. ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ನೆಟ್‌ಬಾಲ್‌ ಟೂರ್ನಿ ಆಯೋಜನೆಯಾಗಿದ್ದು ಖುಷಿ ನೀಡಿದೆ. ಇದೇ ರೀತಿ ರಾಜ್ಯಮಟ್ಟದ ಬೇರೆ ಕ್ರೀಡೆಗಳೂ ನಡೆಯಬೇಕು.
ಸೌಜನ್ಯ ಜಿ., ಕೊಪ್ಪಳ ಜಿಲ್ಲಾ ತಂಡದ ಆಟಗಾರ್ತಿ
ಕ್ರೀಡಾಕೂಟದ ನೆಪದಲ್ಲಿ ಮೊದಲ ಬಾರಿಗೆ ಕೊಪ್ಪಳಕ್ಕೆ ಬಂದಿದ್ದೇನೆ. ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಗಿ ಆಡುವುದು ಹೊಸ ಅನುಭವ ನೀಡುತ್ತದೆ.
ಭಾರ್ಗವ್‌ ಎಲ್‌. , ಕೋಲಾರ ತಂಡದ ಆಟಗಾರ
ಕೊಪ್ಪಳ ಜಿಲ್ಲೆ ಮೊದಲ ಬಾರಿಗೆ ನೆಟ್‌ಬಾಲ್‌ ಟೂರ್ನಿಗೆ ಆತಿಥ್ಯ ವಹಿಸಿದ್ದೇವೆ. ಎಲ್ಲರಿಗೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಇದು ಜಿಲ್ಲೆಯಲ್ಲಿ ಕ್ರೀಡೆ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಜಗದೀಶ್ ಜಿ.ಎಚ್‌., ಡಿಡಿಪಿಯು ಕೊಪ್ಪಳ
ಕೊಪ್ಪಳದ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ನೆಟ್‌ಬಾಲ್‌ ಟೂರ್ನಿಯಲ್ಲಿ ತಂಡಗಳ ಪೈಪೋಟಿಯ ಚಿತ್ರಣ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.