ADVERTISEMENT

ಕೊಪ್ಪಳ: ಜಿಲ್ಲಾಕೇಂದ್ರದಲ್ಲಿ ಬೀದಿ ನಾಯಿಗಳ ಹಾವಳಿ

ಪ್ರಮೋದ ಕುಲಕರ್ಣಿ
Published 6 ನವೆಂಬರ್ 2025, 7:10 IST
Last Updated 6 ನವೆಂಬರ್ 2025, 7:10 IST
   

ಕೊಪ್ಪಳ: ಜಿಲ್ಲಾಕೇಂದ್ರದಲ್ಲಿ ಜನನಿಬಿಡ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ನಗರಸಭೆ ಸಮೀಪ, ಮಾರುಕಟ್ಟೆ ಪ್ರದೇಶ, ಸಾಲರಜಂಗ್‌ ರಸ್ತೆ, ಸಿಂಪಿಲಿಂಗಣ್ಣ ರಸ್ತೆ, ಲೇಬರ್‌ ವೃತ್ತ, ಗಂಜ್‌ ಸರ್ಕಲ್‌, ಜವಾಹರ ರಸ್ತೆ ಹಾಗೂ ಗವಿಮಠದ ಆವರಣ ಹೀಗೆ ಅನೇಕ ಕಡೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲೆಗಳು ಹಾಗೂ ಅಂಗನವಾಡಿಗಳ ಸುತ್ತಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಮಕ್ಕಳಿಗೆ ನಾಯಿ ಕಚ್ಚಿದರೆ ಹೇಗೆ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ.

ಬೀದಿನಾಯಿಗಳು ಕಳೆದ ವರ್ಷ ಎರಡು ದಿನಗಳಲ್ಲಿ ಆರು ಜನರ ಮೇಲೆ ದಾಳಿ ಮಾಡಿವೆ. ಇದರಲ್ಲಿ ಮಕ್ಕಳೂ ಸೇರಿದ್ದರು. ಕನಕಗಿರಿ ಓಣಿಯಲ್ಲಿ ಐದು ವರ್ಷದ ಮಗುವಿನ ಕಿವಿಯ ಹಿಂಭಾಗ, ಕುತ್ತಿಗೆ ಬಳಿ ನಾಯಿ ಕಚ್ಚಿತ್ತು. ಶಾಲೆಗೆ ಹೊರಟಿದ್ದ ಘಟನೆ ನಡೆದಿದ್ದರಿಂದ ಬಾಲಕನ ಸಮವಸ್ತ್ರ ರಕ್ತವಾಗಿತ್ತು. ಮೂರು ವರ್ಷಗಳ ಹಿಂದೆ ಸಜ್ಜಿಹೊಲ ಓಣಿಯ ನಿವಾಸಿ ಮುತ್ತು ಭೀಮಪ್ಪ ಎಂಬುವರ ನಾಲ್ಕು ವರ್ಷದ ಪುತ್ರ ಪುರುಷೋತ್ತಮ  ನಾಯಿ ಕಡಿತಕ್ಕೆ ಒಳಗಾಗಿದ್ದರು. ಅವರಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ADVERTISEMENT

ಬೀದಿನಾಯಿಗಳ ನಿರ್ವಹಣೆ ಹೊಣೆ ಹೊತ್ತಿರುವ ಇಲ್ಲಿನ ನಗರಸಭೆ ಹಲವು ದಿನಗಳ ಹಿಂದೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಸಂಬಂಧಿಸಿದ ಇಲಾಖೆ ಮೂಲಕ ಆರಂಭಿಸಿತ್ತು. ಇತ್ತೀಚೆಗೆ ಅದು ಸ್ಥಗಿತವಾಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುವ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಆವರಣದಲ್ಲಿ ಸಾಕಷ್ಟು ಬೀದಿ ನಾಯಿಗಳು ಬೀಡುಬಿಟ್ಟಿದ್ದವು. ಜಿಲ್ಲೆ ಮತ್ತು ಹೊರಜಿಲ್ಲೆಗಳಿಂದ ಗವಿಮಠಕ್ಕೆ ಭೇಟಿ ನೀಡುವ ಭಕ್ತರು ನೀಡುವ ಆಹಾರವನ್ನೂ ನೆಚ್ಚಿಕೊಂಡು ಸಾಕಷ್ಟು ನಾಯಿಗಳು ಅಲ್ಲಿಗೆ ಬರುತ್ತಿವೆ. ಇವು ಏಕಾಏಕಿ ದಾಳಿ ನಡೆಸಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ನಾಯಿಗಳ ಹಾವಳಿ ಕುರಿತು ಎಸ್‌ಡಿಪಿಐ ಪಕ್ಷದ ಪ್ರಮುಖರು ನಗರಸಭೆ ಹಿಂದಿನ ಅಧ್ಯಕ್ಷ ಸುರೇಶ ಬಬಲಾದಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ವಹಿಸಿರಲಿಲ್ಲ. ‘ಹಿಂದಿನ ಆಯುಕ್ತರಿಗೆ ಬೀದಿನಾಯಿಗಳ ಹಾವಳಿ ಕುರಿತು ಲಿಖಿತವಾಗಿಯೇ ದೂರು ಕೊಟ್ಟಿದ್ದೇವೆ. ಸಾಮಾಜಿಕ ತಾಣದಲ್ಲಿಯೂ ಸಮಸ್ಯೆಯನ್ನು ಹಂಚಿಕೊಂಡಿದ್ದೇವೆ. ಆದರೂ ಕ್ರಮವಾಗಿಲ್ಲ’ ಎಂದು
ಹೇಳಿದರು.

ಬೀದಿನಾಯಿಗಳ ಹಾವಳಿಯಿಂದ ಪಾದಚಾರಿಗಳು ಹಾಗೂ ದ್ವಿಚಕ್ರವಾಹನಗಳ ಸವಾರರಿಗೆ ತೊಂದರೆಯಾಗಿದೆ. ನಗರಸಭೆ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು.
ಶಿವಪ್ಪ ಹಡಪದ, ಕೊಪ್ಪಳದ ನಿವಾಸಿ
ಬೀದಿನಾಯಿಗಳು ಹಿಂದೆ ಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ. ಮತ್ತೆ ಅದೇ ಸಮಸ್ಯೆ ಆಗಬಾರದು. ಈಗಲೇ ಎಚ್ಚರ ವಹಿಸಬೇಕು
ಸಲೀಂ ಖಾದ್ರಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಧ್ಯಕ್ಷ
ಬೀದಿ ನಾಯಿಗಳಿಗೆ ರೇಬಿಸ್‌ ಲಸಿಕೆ ಹಾಕಿಸಲಾಗುತ್ತಿದ್ದು, ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೂ ಕ್ರಮ ವಹಿಸಲಾಗಿದೆ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವೆ
ವೆಂಕಟೇಶ್ ನಾಗನೂರು  ನಗರಸಭೆ ಪೌರಾಯುಕ್ತ

ಉಪಲೋಕಾಯುಕ್ತರಿಂದಲೂ ಸೂಚನೆ

ಜಿಲ್ಲಾಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ನಾಯಿಗಳನ್ನು ಎರಡು ತಿಂಗಳೊಳಗೆ ಸ್ಥಳಾಂತರಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್‌ ಆದೇಶವಿದೆ. ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.