ADVERTISEMENT

ದೇಶದ ಇತಿಹಾಸ ಉಳಿಸಲು ಹೋರಾಟ: ಸತೀಶ್ ಜಾರಕಿಹೊಳಿ

ಬಹುತ್ವ ಭಾರತದ ಸವಾಲುಗಳು ಚಿಂತನಾ ಶಿಬಿರ; ಸತೀಶ್ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 14:35 IST
Last Updated 28 ನವೆಂಬರ್ 2022, 14:35 IST
ಕೊಪ್ಪಳ ತಾಲ್ಲೂಕಿನ ಹಟ್ಟಿ ಕ್ರಾಸ್ ಬಳಿ ಸೋಮವಾರ ನಡೆದ ಚಿಂತನಾ ಶಿಬಿರದಲ್ಲಿ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಮಾತನಾಡಿದರು
ಕೊಪ್ಪಳ ತಾಲ್ಲೂಕಿನ ಹಟ್ಟಿ ಕ್ರಾಸ್ ಬಳಿ ಸೋಮವಾರ ನಡೆದ ಚಿಂತನಾ ಶಿಬಿರದಲ್ಲಿ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಮಾತನಾಡಿದರು   

ಕೊಪ್ಪಳ: ‘ನಮ್ಮ ಸಂವಿಧಾನ ಹಾಗೂ ದೇಶದ ಇತಿಹಾಸ ತಿರುಚಲು ಹೊರಟವರಿಗೆ ತಕ್ಕಪಾಠ ಕಲಿಸಬೇಕು. ಈ ಕುರಿತು ಜಾಗೃತಿ ಮೂಡಿಸುವುದೇ ವೇದಿಕೆಯ ಮುಖ್ಯ ಉದ್ದೇಶ’ ಎಂದು ಶಾಸಕ ಹಾಗೂಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಲೇಬಗೇರಿ ಹತ್ತಿರದ ಹಟ್ಟಿ ಕ್ರಾಸ್ ಬಳಿ ಸೋಮವಾರ ವೇದಿಕೆ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ನಡೆದ ‘ಬಹುತ್ವ ಭಾರತದ ಸವಾಲುಗಳು‘ ಕುರಿತ ಚಿಂತನಾ ಶಿಬಿರದಲ್ಲಿ ಮಾತನಾಡಿ ‘ಇತಿಹಾಸ ಬಿಟ್ಟು ಮಾತನಾಡುವವರು ₹200 ಹಣಕ್ಕೆ ಆಸೆ ಪಡುವ ಗಿರಾಕಿಗಳು. ಪ್ರಸ್ತುತ ದಿನಗಳಲ್ಲಿ ಸುಳ್ಳು ಮರುಸೃಷ್ಟಿ ಮಾಡುವ ಕೆಲಸ ನಡೆಯುತ್ತಿದೆ. ಸಂವಿಧಾನವನ್ನು ರಕ್ಷಣೆ ಮಾಡುವ ತುರ್ತು ಅಗತ್ಯ ಈಗಿದೆ. ಇಲ್ಲವಾದರೆ ಮನುಸ್ಮೃತಿ ಅಧಿಕಾರಕ್ಕೆ ಬರುತ್ತದೆ.’ ಎಂದರು.

‘ಅಂಬೇಡ್ಕರ್‌ಗೆ ತೊಂದರೆಕೊಟ್ಟವರು, ಬುದ್ಧನನ್ನು ದೇಶಬಿಟ್ಟು ಓಡಿಸಿದವರು ಹಾಗೂ ಬಸವಣ್ಣನನ್ನು ಕುರ್ಚಿಯಿಂದ ಇಳಿಸಿದವರು ಯಾರು? ಈ ಎಲ್ಲಾ ಪ್ರಶ್ನೆಗಳನ್ನು ಕೇಳಿದರೆ ದೇಶದ್ರೋಹಿಯ ಪಟ್ಟ ಕಟ್ಟುತ್ತಾರೆ. ಈಗ ಸಂವಿಧಾನದ ರಕ್ಷಣೆ ಮತ್ತು ಬಸವಣ್ಣನವರ ಹೋರಾಟದ ಬಗ್ಗೆ ಹೆಚ್ಚು ಚರ್ಚೆಯಾಗಬೇಕು. ವಾಲ್ಮೀಕಿ, ಬುದ್ಧ, ಬಸವ, ಅಂಬೇಡ್ಕರ್‌, ಮಡಿವಾಳ ಮಾಚಯ್ಯ, ಕುವೆಂಪು ಅವರ ಕುರಿತು ನೀವೆಲ್ಲರೂ ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ‘ಆಳುವವರಿಗೆ ಸಂವಿಧಾನ ಹಾಳು ಮಾಡುವುದೇ ಬೇಕಾಗಿದೆ. ಸಂವಿಧಾನ ಕೊಟ್ಟ ಸವಲತ್ತುಗಳನ್ನು ಬಳಸಿಕೊಂಡು ಮುಂದೆ ಬಂದವರು ಸಂವಿಧಾನದ ರಕ್ಷಣೆ ಮಾಡಬೇಕು’ ಎಂದರು.

ವೇದಿಕೆಯ ಇರ್ಫಾನ್ ಮುದಗಲ್, ಎಚ್‌.ಎನ್‌. ಬಡಿಗೇರ್, ಜಯಣ್ಣ ದಾವಣಗೇರಿ, ಮುಖಂಡರಾದ ರಮೇಶ ನಾಯಕ್, ಅಮ್ಜದ್ ಪಟೇಲ್, ಸುಖರಾಜ್‌ ತಾಳಕೇರಿ, ಯಮನೂರಪ್ಪ ಗೊರ್ಲೆಕೊಪ್ಪ, ಛತ್ರಪ್ಪ ಚಲವಾದಿ, ಅಕ್ರ್‌ಅಬ್‌ ಖಾಜಿ, ನಾಗರಾಜ ತಲ್ಲೂರ, ಮಾಲತಿ ನಾಯಕ್, ಜ್ಯೋತಿ ಗೊಂಡಬಾಳ, ಶರಣಪ್ಪ ವಡಗೇರಿ, ರಾಮಣ್ಣ ಕಲ್ಲನವರ, ಮಂಜುನಾಥ ಗೊಂಡಬಾಳ, ಭೀಮಣ್ಣ ಹವಳೆ, ಈರಪ್ಪ ಕುಡಗುಂಟಿ ಪಾಲ್ಗೊಂಡಿದ್ದರು.

***

ಪ್ರಸ್ತುತ ಸರ್ಕಾರಿ ಶಾಲೆಗಳಿಗೆ ಹೋರಾಟ ಮಾಡಬೇಕಾಗಿದೆಯೇ ವಿನಃ ದೇವಸ್ಥಾನಗಳನ್ನು ಕಟ್ಟಲು ಅಲ್ಲ. ಇವುಗಳ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು.
ಸತೀಶ ಜಾರಕಿಹೊಳಿ, ಶಾಸಕ

***

ದೇಶದ ಮಾಧ್ಯಮಗಳನ್ನು ಒಂದು ಪಕ್ಷ ಖರೀದಿಸಿದ್ದು ದೇಶದ ನಾಲ್ಕನೆ ಅಂಗ ನಮ್ಮ ಪಾಲಿಗೆ ಇಲ್ಲದಾಗಿದೆ. ನೇರವಾಗಿ ನಮ್ಮ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.
ವೈ. ಎನ್. ಗೌಡರ್, ಪ್ರಗತಿಪರ ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.