ADVERTISEMENT

ಧರ್ಮಸ್ಥಳ ಪೂಜ್ಯರ ಯೋಜನೆ ದೇಶಕ್ಕೆ ಮಾದರಿ: ತಂಗಡಗಿ

ಕಾರಟಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಶಿಷ್ಯವೇತನ ಮಂಜೂರು ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:55 IST
Last Updated 7 ಆಗಸ್ಟ್ 2025, 6:55 IST
ಕಾರಟಗಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಮಂಗಳವಾರ ಶಿಷ್ಯವೇತನ ಮಂಜೂರಾತಿ ಪತ್ರಗಳನ್ನು ಸಚಿವ ಶಿವರಾಜ ತಂಗಡಗಿ ವಿತರಿಸಿದರು
ಕಾರಟಗಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಮಂಗಳವಾರ ಶಿಷ್ಯವೇತನ ಮಂಜೂರಾತಿ ಪತ್ರಗಳನ್ನು ಸಚಿವ ಶಿವರಾಜ ತಂಗಡಗಿ ವಿತರಿಸಿದರು   

ಕಾರಟಗಿ: ‘ಧರ್ಮಸ್ಥಳ ಸಂಸ್ಥೆಯ ಸ್ವ ಸಹಾಯ ಸಂಘದ ಮಕ್ಕಳಿಗೆ ಪ್ರತಿ ತಿಂಗಳು ವಿದ್ಯಾರ್ಥಿ ವೇತನ ನೀಡುವುದು  ಪರೋಕ್ಷವಾಗಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತೆ. ಧರ್ಮಸ್ಥಳ ಪೂಜ್ಯರ ಈ ಯೋಜನೆ ದೇಶಕ್ಕೆ ಮಾದರಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಮಂಗಳವಾರ ನಡೆದ ಕಾರಟಗಿ, ಕನಕಗಿರಿಯ 127 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಕಾರ್ಯಕ್ರಮದಲ್ಲಿ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

‘ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಬಡವರ ಆರ್ಥಿಕ ಸಮಸ್ಯೆಯನ್ನು ನಿವಾರಣೆ ಮಾಡುತ್ತಿವೆ. ಶಿಷ್ಯವೇತನ ಪಡೆದ ವಿದ್ಯಾರ್ಥಿಗಳು ಭವಿಷ್ಯದ ದಿನಗಳಲ್ಲಿ ಗ್ರಾಮಾಭಿವೃದ್ದಿ ಯೋಜನೆಗೆ ಸಹಕಾರಿಯಾಗುವ ಕಾರ್ಯಗಳ ಜತೆಗೆ ಸುಕ್ಷೇತ್ರ ಧರ್ಮಸ್ಥಳಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕು’ ಎಂದು ಹೇಳಿದರು.

ADVERTISEMENT

ಸಂಸ್ಥೆಯ ಯೋಜನಾಧಿಕಾರಿ ನಿಂಗಪ್ಪ ಡಿ. ಅಗಸರ್‌ ಮಾತನಾಡಿ, ರಾಜ್ಯದಲ್ಲಿ 1,25,010 ಮಕ್ಕಳಿಗೆ ₹152. 75 ಕೋಟಿ ಶಿಷ್ಯವೇತನವನ್ನು ಸುಜ್ಞಾನ ನಿಧಿ ಯೋಜನೆಯಡಿ ನೀಡಲಾಗುತ್ತಿದೆ. ಈ ಬಾರಿ ಕಾರಟಗಿ ಮತ್ತು ಕನಕಗಿರಿ ತಾಲೂಕಿನ 127 ಮಕ್ಕಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಪ್ರತಿ ತಿಂಗಳು ₹400ರಿಂದ ₹1 ಸಾವಿರವರೆಗೆ ಶಿಷ್ಯವೇತನ ಸಿಗುವುದು ಎಂದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರಕಾಶರಾವ್, ಸಮಾಜ ಸೇವಕರಾದ ಚನ್ನಬಸಪ್ಪ ಸುಂಕದ, ಮಂಜುನಾಥ ಮಸ್ಕಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಮೇಶ ಕುಲಕರ್ಣಿ, ಕೃಷಿ ಮೇಲ್ವಿಚಾರಕ ಎನ್. ಗಂಗಾಧರಪ್ಪ, ಮರಳಿ ವಲಯದ ಮೇಲ್ವಿಚಾರಕ ಚಂದ್ರು, ಬೇವಿನಾಳ ವಲಯದ ಮೇಲ್ವಿಚಾರಕ ಸುರೇಶ್, ಕಾರಟಗಿ ವಲಯದ ಮೇಲ್ವಿಚಾರಕಿ ಶೀಲಾ ಹಾಗೂ ಯೋಜನಾ ಕಚೇರಿಯ ವ್ಯವಸ್ಥಾಪಕ ಪುಟ್ಟರಾಜು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.