ADVERTISEMENT

ಸಮಯಕ್ಕೆ ಸರಿಯಾಗಿ ಬಸ್‌ ಓಡಿಸಲು ಒತ್ತಾಯ

ಹುಲಿಗಿ: ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 4:57 IST
Last Updated 13 ನವೆಂಬರ್ 2021, 4:57 IST
ಮುನಿರಾಬಾದ್‌ ಅಮೀಪದ ಹುಲಿಗಿ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಓಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಮುನಿರಾಬಾದ್‌ ಅಮೀಪದ ಹುಲಿಗಿ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಓಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಹುಲಿಗಿ (ಮುನಿರಾಬಾದ್): ಸಮೀಪದ ಹುಲಿಗಿ ಗ್ರಾಮಕ್ಕೆ ಮೊದಲಿನಂತೆ ಸಮಯಕ್ಕೆ ಸರಿಯಾಗಿ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಓಡಿಸಬೇಕು ಎಂದು ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಒತ್ತಾಯಿಸಿದರು.

ಈ ಮೊದಲು, ಹುಲಿಗಿ, ಶಿವಪುರ ಮತ್ತು ಸಣಾಪುರ ಗ್ರಾಮದಲ್ಲಿ ವಸತಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಅವುಗಳನ್ನು ರದ್ದು ಹಾಗೂ ಮಾರ್ಗ ಬದಲಾಯಿಸುವುದರಿಂದ ಸಮಸ್ಯೆಯಾಗಿದೆ. ಹುಣ್ಣಿಮೆ, ಶುಕ್ರವಾರ ಮತ್ತು ಮಂಗಳವಾರದಂದು ಬಸ್‌ಗಳು ಮುನಿರಾಬಾದ್ ಒಳಗೆ ಹೋಗದೆ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದ ಮುನಿರಾಬಾದ್‌ಗೆ ಹೋಗುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮುಂಗಡ ದುಡ್ಡು ಕೊಟ್ಟು, ಬಸ್‌ಪಾಸ್‌ ಮಾಡಿಸಿದ್ದೇವೆ ಆದರೂ ಸೌಕರ್ಯ ಇಲ್ಲ ಎಂದರೆ ಹೇಗೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

ನಿಗದಿತ ಸಮಯ ತಪ್ಪಿಸಿ ಬಂದ ಎರಡು ಬಸ್‌ಗಳನ್ನು ವಿದ್ಯಾರ್ಥಿಗಳು ಕೆಲಕಾಲ ತಡೆದರು. ಹೊಸಪೇಟೆ ವಿಭಾಗದ ಸಂಚಾರ ನಿರೀಕ್ಷಕ ಮಂಜುನಾಥ ಚಿದ್ರಿ ಮತ್ತು ನಿಲ್ದಾಣ ಅಧಿಕಾರಿಗಳು ಸ್ಥಳಕ್ಕೆ ಬಂದರೂ ಸಮಸ್ಯೆ ಇತ್ಯರ್ಥವಾಗಲಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಅಸಹಾಯಕರಾದರೆ, ಇತರ ಪ್ರಯಾಣಿಕರು ಪರದಾಡಿದರು.

ADVERTISEMENT

ಪಿಯು ವಿದ್ಯಾರ್ಥಿಗಳಿಗೆ ಕಿರುಪರೀಕ್ಷೆ ಇದೆ. ಪರೀಕ್ಷಾ ಸಮಯದಲ್ಲಿ ಸಾರಿಗೆ ಸಂಸ್ಥೆಯ ಹೊಣೆಗೇಡಿತನ ಅಕ್ಷಮ್ಯ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆ ಇರುವ ವಿದ್ಯಾರ್ಥಿಗಳನ್ನು ಪರ್ಯಾಯ ವಾಹನ ವ್ಯವಸ್ಥೆ ಮಾಡಿ ಹೊಸಪೇಟೆಗೆ ಕಳಿಸಲಾಗಿದೆ ಎಂದು ಮುನಿರಾಬಾದ್ ಪೊಲೀಸ್ ಠಾಣಾಧಿಕಾರಿ ಸುಪ್ರೀತ್ ಪಾಟೀಲ ಮಾಹಿತಿ ನೀಡಿದರು. ಸುಮಾರು ಮೂರು ತಾಸು ನಂತರ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಸ್‌ನಲ್ಲಿ ಹೊಸಪೇಟೆ ಡಿಪೋಗೆ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.