
ಕುಷ್ಟಗಿ: ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಬೇಡುವ ಪ್ರಮುಖ ವಾಣಿಜ್ಯ ಬೆಳೆ. ಹೀಗಾಗಿ ಇದನ್ನು ಕೇವಲ ಮಳೆಗಾಲದ ಅವಧಿಯಲ್ಲಿ ಮಾತ್ರ ರೈತರು ಬೆಳೆಯುತ್ತಿದ್ದರು. ಆದರೆ ಈ ವರ್ಷದ ಚಿತ್ರಣವೇ ಬೇರೆಯಾಗಿದೆ. ಮುಂಗಾರಿನಲ್ಲಿ ಮಾತ್ರ ಕಾಣುತ್ತಿದ್ದ ಮೆಕ್ಕೆಜೋಳದ ಬೆಳೆ, ಈಗ ಬೇಸಿಗೆಯಲ್ಲೂ ಅತ್ಯಧಿಕ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದೆ.
ಪ್ರಸಕ್ತ ವರ್ಷದ ಮುಂಗಾರು ಹಿಂಗಾರು ಅವಧಿಯಲ್ಲಿ ಅತಿ ಹೆಚ್ಚು ಮಳೆ ಬಂದು ಹಳ್ಳಕೊಳ್ಳಗಳೆಲ್ಲ ತಿಂಗಳುಗಟ್ಟಲೇ ಹರಿದಿದ್ದವು. ಹೀಗಾಗಿ ಅಂತರ್ಜಲ ಹೆಚ್ಚಾಗಿ ನೀರಿಲ್ಲದೆ ಬತ್ತಿಹೋಗಿದ್ದ ಕೊಳವೆಬಾವಿಗಳಲ್ಲಿ ಜೀವಜಲ ಸಮೃದ್ಧಿಯಾಗಿತ್ತು. ಬಂದ್ ಆಗಿದ್ದ ಕೊಳವೆಬಾವಿಗಳೆಲ್ಲ ಪುನಃ ಚಾಲೂ ಆಗಿದ್ದರಿಂದ ಸಂತಸಗೊಂಡ ರೈತರು ಬೇಸಿಗೆ ಅವಧಿಯಲ್ಲೂ ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದಾರೆ.
ಈ ಕಾರಣಕ್ಕೆ ತಾಲ್ಲೂಕು ಹಾಗೂ ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮುಂಗಾರು ಅವಧಿಯಲ್ಲಿ ಇರುವಂತೆ ಮೆಕ್ಕೆಜೋಳದ ಬೆಳೆ ಕಂಡುಬರುತ್ತಿದೆ. ಈ ಭಾಗದಲ್ಲಿ ಬೇಸಿಗೆ ಅವಧಿಲ್ಲಿ ಕೇವಲ ಗೆಜ್ಜೆಶೇಂಗಾ ಬೆಳೆಗೆ ಮಾತ್ರ ಆಸಕ್ತಿ ತೋರುತ್ತಿದ್ದ ರೈತರು ಮೆಕ್ಕೆಜೋಳವನ್ನು ಪರ್ಯಾಯ ಬೆಳೆಯನ್ನಾಗಿಸಿಕೊಂಡಿದ್ದಾರೆ. ಶೇಂಗಾ ಬೀಜ ದುಬಾರಿ, ಕೂಲಿಕಾರ್ಮಿಕರ ಅಗತ್ಯವೂ ಹೆಚ್ಚು. ಕೀಟ, ರೋಗಬಾಧೆಯೂ ಅಧಿಕ. ಬಹಳಷ್ಟು ಕಾಳಜಿ ಮಾಡಿದರೂ ಇಳುವರಿ ಕುಂಠಿತವಾಗುತ್ತಿರುವುದು, ಮಾರುಕಟ್ಟೆಯಲ್ಲಿ ದರ ಕುಸಿತ. ಹೀಗಾಗಿ ಹೆಚ್ಚಿನ ಶ್ರಮ ಇಲ್ಲದ ಶೇಂಗಾಕ್ಕಿಂತಲೂ ಕಡಿಮೆ ಖರ್ಚಿನಲ್ಲಿ ಬರುತ್ತದೆ ಎಂಬ ಕಾರಣಕ್ಕೆ ರೈತರು ಮೆಕ್ಕೆಜೋಳ ಬೆಳೆಯುವುದಕ್ಕೆ ಹೆಚ್ಚು ಆಸಕ್ತಿ ತೋರಿದ್ದಾರೆ.
ಮಳೆಗಾಲದಲ್ಲಿ ಬೆಳೆಯುವುದಕ್ಕಿಂತಲೂ ಅತ್ಯುತ್ತಮವಾಗಿ ಬೆಳೆದು ನಿಂತಿರುವ ಮೆಕ್ಕೆಜೋಳ ಅಚ್ಚರಿ ಪಡುವಂತಿದೆ. ಮಳೆ ಇಲ್ಲದ ಕಾರಣ ಮೇವಿನ ಗುಣಮಟ್ಟವೂ ಕೆಡುವುದಿಲ್ಲ, ಮೆಕ್ಕೆಜೋಳ ತೆನೆ ಯಂತ್ರಕ್ಕೆ ಹಾಕಿದ ನಂತರ ಉಳಿಯುವ ಸಿಪ್ಪೆ ಜಾನುವಾರಿಗೆ ಉತ್ತಮ ಮೇವು ಸಹ ಆಗುತ್ತದೆ. ಮೆಕ್ಕೆಜೋಳದ ಕಾಳು ಸಹ ಅತ್ಯುತ್ತಮವಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯೂ ಸಿಗುತ್ತದೆ ಎನ್ನುತ್ತಾರೆ ರೈತ ಶರಣಪ್ಪ ಕಂದಕೂರು.
‘ಮೆಕ್ಕೆಜೋಳ ಹಾಕೂದಂದ್ರ ಎಮ್ಮಿ ಬೆನ್ನಿಗೆ ನೀರು ಹೊಯ್ದಂಗ. ಹೆಚ್ಚಿನ ಪ್ರಮಾಣದ ನೀರು ಬೇಕು, ಆದ್ರ ಈಗ ಬೋರವೆಲ್ದೊಳಗ ನೀರು ಹೆಚ್ಚಾಗೇತಿ, ಇನ್ನೇನು ತಿಂಗಳೊಳಗ ಮೆಕ್ಕೆಜೋಳ ಕಟಾವು ಆಕೈತಿ’ ಎನ್ನುವ ಅನುಭವದ ಮಾತು ಶಾಖಾಪುರದ ರೈತ ಹನುಮಗೌಡ ಅವರದ್ದು.
ಕೃಷಿ ಇಲಾಖೆಗೆ ನಿಲುಕದ ಲೆಕ್ಕ: ಊರಿಗೆ ನೂರಾರು ಎಕರೆ ಮೆಕ್ಕೆಜೋಳದ ಬೆಳೆ ಕ್ಷೇತ್ರ ಇದೆ. ಯಾವುದೇ ಕಡೆ ಹೋದರೂ ಮೆಕ್ಕೆಜೋಳ ಗೋಚರಿಸುತ್ತಿದೆ. ಆದರೆ ಕೃಷಿ ಇಲಾಖೆಗೆ ಮಾತ್ರ ಎಕರೆವಾರು ಲೆಕ್ಕ ನಿಲುಕಿಲ್ಲ. ಬೇಸಿಗೆಯಲ್ಲಿ ತಾಲ್ಲೂಕಿನಲ್ಲಿ ಮೆಕ್ಕೆಜೋಳದ ಕ್ಷೇತ್ರ ಎಷ್ಟಿದೆ ಎಂದು ಕೇಳಿದರೆ ಕೃಷಿ ಇಲಾಖೆ ಅಧಿಕಾರಿಗಳು ತಡವರಿಸುತ್ತಾರೆ. ನಿಖರ ಮಾಹಿತಿಯೇ ಇಲ್ಲ. ಇಷ್ಟು ಹೇಳುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಂಡ ಕೃಷಿ ಅಧಿಕಾರಿಗಳು ಹೇಳಿದ್ದು 2,800 ಹೆಕ್ಟರ್ ಮಾತ್ರ! ಎಂದು ಹೇಳಿ ನೀಡಿ ಅಚ್ಚರಿ ಮೂಡಿಸಿದರು. ಏಕೆಂದರೆ ಬೇಸಿಗೆಯಲ್ಲಿ ಯಾರೂ ಮೆಕ್ಕೆಜೋಳ ಬೆಳೆಯುವುದಿಲ್ಲ ಎಂಬುದು ಕೃಷಿ ಇಲಾಖೆಯ ಅಂದಾಜು. ಮುಂಗಾರು ಹಂಗಾಮಿನಲ್ಲಿ ಸರ್ಕಾರಕ್ಕೆ ಬೆಳೆ ಕ್ಷೇತ್ರದ ವಿವರ ನೀಡುವ ಕೃಷಿ ಇಲಾಖೆದ್ದು ರಾಮ ಕೃಷ್ಣನ ಲೆಕ್ಕ ಮಾತ್ರ ಅದು. ಹಿಂದಿನಿಂದಲೂ ಇದೇ ಪದ್ಧತಿ ನಡೆದುಬಂದಿದೆ ಎನ್ನುವ ಆಕ್ಷೇಪ ರೈತರದು.
ಬೇಸಿಗೆಯಲ್ಲಿ ಮೆಕ್ಕೆಜೋಳ ಬೆಳೆಯುವುದು ಕಡಿಮೆ. ಮುಂಗಾರಿನಲ್ಲಿ ಮಾತ್ರ ಹೆಚ್ಚಿನ ಪ್ರದೇಶದಲ್ಲಿರುತ್ತದೆ. ಅಲ್ಲಲ್ಲಿ ಅಲ್ಪಸ್ವಲ್ಪ ಮೆಕ್ಕೆಜೋಳ ಬೆಳೆಯಲಾಗಿದೆನಾಗರಾಜ ಕಾತರಕಿ ಕೃಷಿ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.