ಕನಕಗಿರಿ: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಸೂರ್ಯಕಾಂತಿ ಬೆಳೆ ಬೂದು ರೋಗದಿಂದ ಒಣಗುತ್ತಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸಮೀಪದ ಬೆನಕನಾಳ, ಗೊರವಿ ಹಂಚಿನಾಳ, ಕಲಕೇರಿ ಗ್ರಾಮಗಳ ರೈತರ ಬೆಳೆ ನಾಶದಿಂದ ಆತಂಕಗೊಂಡಿದ್ದಾರೆ. 20ಕ್ಕೂ ಹೆಚ್ಚು ರೈತರ ಬೆಳೆ ನಾಶವಾಗಿದೆ. ಉತ್ತಮ ಫಸಲು ಪಡೆಯಲು ಸಾಲ ಮಾಡಿ ಬಿತ್ತನೆಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದೇವೆ. ಆದರೆ ಮಳೆಯಿಂದಾಗಿ ಬೆಳೆ ನಾಶವಾಗುತ್ತಿದ್ದು, ಮತ್ತೆ ಸಾಲದ ಸುಳಿಗೆ ಸಿಲುಕುವ ಆತಂಕ ಎದುರಾಗಿದೆ ಎಂದು ರೈತ ದುರಗಪ್ಪ ವದ್ದಿಗೇರಿ ಅಳಲು ವ್ಯಕ್ತಪಡಿಸಿದರು.
ಸೂರ್ಯಕಾಂತಿ ಬೆಳೆಗೆ ಪೂರ್ಣ ಪ್ರಮಾಣದಲ್ಲಿ ತೆನೆಕಟ್ಟಿಲ್ಲ. ಅಲ್ಲಲ್ಲಿ ಒಣಗುತ್ತಿದೆ. ಈ ಸಮಯದಲ್ಲಿ
ಬೂದು ರೋಗ ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಬಿಮಾ ಫಸಲು ಯೋಜನೆಯಲ್ಲಿ ಬೆಳೆ ನೋಂದಣಿ ಮಾಡಿಸಿದ್ದು, ಈಚೆಗೆ ಆನ್‌ಲೈನ್ ಮೂಲಕ ಕರೆ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ವಿಮಾ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿದ್ದಾರೆ. ಬೆಳೆ ಪರಿಶೀಲಿಸಿದ್ದು, ಸೂಕ್ತ ಕ್ರಮತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದು, ಸ್ವಲ್ಪ ನೆಮ್ಮದಿ ತಂದಿದೆ. ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ರೈತ ಕೃಷ್ಣ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.