ADVERTISEMENT

ಕೊಪ್ಪಳ | ಕಾಡಿದ ಮಳೆ; ಸಮೀಕ್ಷೆ ನಿಧಾನ ಏರುಗತಿ

ಮೊದಲ ಎರಡು ದಿನಗಳಲ್ಲಿ 350 ಮನೆಗಳ ದತ್ತಾಂಶಗಳ ನೋಂದಣಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 3:10 IST
Last Updated 24 ಸೆಪ್ಟೆಂಬರ್ 2025, 3:10 IST
ಕೊಪ್ಪಳದಲ್ಲಿ ಮಂಗಳವಾರ ಸುರಿವ ಮಳೆಯ ನಡುವೆ ಹೊರಟ ಟಾಂಗಾವಾಲಾ –ಪ್ರಜಾವಾಣಿ ಚಿತ್ರ
ಕೊಪ್ಪಳದಲ್ಲಿ ಮಂಗಳವಾರ ಸುರಿವ ಮಳೆಯ ನಡುವೆ ಹೊರಟ ಟಾಂಗಾವಾಲಾ –ಪ್ರಜಾವಾಣಿ ಚಿತ್ರ   

ಕೊಪ್ಪಳ: ಜಿಲ್ಲಾಕೇಂದ್ರದಲ್ಲಿ ದಿನಪೂರ್ತಿ ಕಾಡಿದ ಮಳೆ, ಸಮೀಕ್ಷೆ ಮಾಡುವವರಿಗೆ ನೆಟ್‌ವರ್ಕ್‌ ಸಮಸ್ಯೆ ಕೆಲವರಿಗಾದರೆ, ಇನ್ನೂ ಹಲವರಿಗೆ ಸಮೀಕ್ಷಾ ಪರಿಕರಗಳ ಅಲಭ್ಯತೆ, ಮೇಲಧಿಕಾರಿಗಳ ಆದೇಶಕ್ಕೆ ಕಾದು ಕುಳಿತ ಶಿಕ್ಷಕರು, ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಹಾಗೂ ಮಳೆ ನಡುವೆಯೂ ದೇವಿಯರ ಮೂರ್ತಿ ನೋಡುವ ಕಾತರ.

ಇದು ಮಂಗಳವಾರ ಜಿಲ್ಲಾ ಕೇಂದ್ರದಲ್ಲಿನ ಚಿತ್ರಣ. ಒಂದೆಡೆ ದಸರಾ ಹಬ್ಬಕ್ಕಾಗಿ ಬಣ್ಣಬಣ್ಣದ ವಿದ್ಯುತ್‌ ದೀಪಗಳನ್ನು ಅಲಂಕಾರ ಮಾಡಲಾಗಿದೆ. ಅದ್ದೂರಿಯಾಗಿ ದೇವಿಯರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಅವುಗಳನ್ನು ಕಣ್ತುಂಬಿಕೊಳ್ಳಲೂ ಸಂಜೆ ಜನರಿಗೆ ಮಳೆ ಅಡ್ಡಿಯಾಯಿತು.

ಸಮೀಕ್ಷೆ ಏರುಗತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೋಮವಾರ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಎರಡನೇ ದಿನವೂ ಮಂದಗತಿಯಲ್ಲಿ ಸಾಗಿತು. ಜಿಲ್ಲೆಯ ಬಹಳಷ್ಟು ಕಡೆ ನೆಟ್‌ವರ್ಕ್‌, ಒಟಿಪಿ ಸಮಸ್ಯೆ ಕಾಡಿತು. ಸಮೀಕ್ಷಕರಿಗೆ ತರಬೇತಿ ಅವಧಿಯಲ್ಲಿ ತೋರಿಸಲಾಗಿದ್ದ ಆ್ಯಪ್‌ನ ವರ್ಷನ್‌ ಬದಲಾಯಿಸಲಾಗಿದ್ದು, ಹೊಸ ಆ್ಯಪ್‌ ಮೊಬೈಲ್‌ನಲ್ಲಿ ಹಾಕಿಕೊಳ್ಳಬೇಕಾಗಿತ್ತು. ಕೆಲವರು ಹಾಕಿಕೊಂಡರೆ ಇನ್ನೂ ಕೆಲವರು ಮೊಬೈಲ್‌ನಲ್ಲಿ ಅಳವಡಿಸಿಕೊಂಡಿಲ್ಲದ ಕಾರಣ ಸಮಸ್ಯೆ ಎದುರಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದರು. ಜಿಲ್ಲೆಯಲ್ಲಿ ಮಂಗಳವಾರದ ಸಂಜೆಯ ಅಂತ್ಯಕ್ಕೆ 350 ಮನೆಗಳ ದತ್ತಾಂಶಗಳನ್ನು ದಾಖಲಿಸಲಾಗಿತ್ತು.   

ADVERTISEMENT

ಜಿಲ್ಲೆಯಲ್ಲಿ ಅಕ್ಟೋಬರ್ 7ರ ತನಕ ಸಮೀಕ್ಷೆ ನಡೆಯಲಿದ್ದು, ಇದಕ್ಕಾಗಿ ಮೊದಲು 2,969 ಸಮೀಕ್ಷಕರನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ. ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಯನ್ನೂ ಸಮೀಕ್ಷೆಗೆ ನೇಮಿಸಿಕೊಳ್ಳಲಾಗಿದೆ.

ತಪ್ಪು ಮ್ಯಾಪಿಂಗ್‌
ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಕೆಲವು ಕಡೆ ತಪ್ಪು ಮ್ಯಾಪಿಂಗ್‌ ಆಗಿದ್ದರಿಂದ ಮುನಿರಾಬಾದ್ ಭಾಗದ ಶಿಕ್ಷಕರಿಗೆ ಕೊಪ್ಪಳದಲ್ಲಿ ಗಣತಿ ಮಾಡುವಂತೆ ಆದೇಶ ಬಂದಿತ್ತು. ಇದನ್ನು ಸರಿಪಡಿಸಲು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಹಿಳಾ ಸಿಬ್ಬಂದಿಗೆ ತಮ್ಮ ಸಮೀಪದ ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಸಮೀಕ್ಷೆಗೆ ನಿಯೋಜಿಸಲಾಗಿದೆ.
ಕೊಪ್ಪಳದಲ್ಲಿ ಮಳೆಯ ನಡುವೆ ಬಂಡಿ ತಳ್ಳುತ್ತ ಹಣ್ಣು ಮಾರಲು ಹೊರಟ ವ್ಯಾಪಾರಿ

ಸಹಾಯವಾಣಿ ಆರಂಭ ಕೊಪ್ಪಳ: ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕಾರ್ಯದ ಬಗ್ಗೆ ಸಾರ್ವಜನಿಕರಿಂದ ಪ್ರತಿನಿತ್ಯ ಬರುವ ಮಾಹಿತಿ ದೂರು ಆಕ್ಷೇಪಣೆ ಸಲಹೆ ಸ್ವೀಕರಿಸಲು ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕರು ಸಮೀಕ್ಷೆ ಕುರಿತು ಗೊಂದಲಗಳು ಇದ್ದರೆ 08539-221606 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. 

‘ಆದೇಶ ಪತ್ರವಿದ್ದವರೆಲ್ಲ ಸಮೀಕ್ಷೆಗೆ ಹೋಗಿ’

ಕೊಪ್ಪಳ: ಸಮೀಕ್ಷೆಗೆ ನಿಯೋಜಿಸಿ ಯಾರಿಗೆಲ್ಲ ಆದೇಶ ಮಾಡಲಾಗಿದೆಯೊ ಅವರು ತಮ್ಮ ವ್ಯಾಪ್ತಿಯಲ್ಲಿ ಸಮೀಕ್ಷಾ ಕೆಲಸ ಮಾಡಬೇಕು. ಯಾರನ್ನೂ ಕರೆದು ಕೆಲಸ ಮಾಡುವಂತೆ ಹೇಳುವುದಿಲ್ಲ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು.

ಸಮೀಕ್ಷಾ ಕಾರ್ಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು ’ಜಿಲ್ಲೆಯಲ್ಲಿ ಮೊದಲ ದಿನಕ್ಕಿಂತಲೂ ಎರಡನೇ ದಿನ ಉತ್ತಮ ಪ್ರಗತಿ ಕಂಡಿದೆ. ಒಂದೆರೆಡು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಸಮೀಕ್ಷೆ ಆರಂಭವಾಗಲಿದೆ. ಇದಕ್ಕಾಗಿ ಹಲವು ಅಧಿಕಾರಿಗಳನ್ನು ನಿಯೋಜಿಸಿ ಸಮೀಕ್ಷೆ ಚುರುಕುಗೊಳಿಸಲು ನಿಗಾ ವಹಿಸಲಾಗುವುದು’ ಎಂದು ತಿಳಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.