ADVERTISEMENT

ಮಕ್ಕಳಿಗೆ ಭಾಷೆಯ ಕೌಶಲ ಕಲಿಸಿ; ಗವಿಮಠ ಶ್ರೀ

ಜ್ಞಾನಜ್ಯೋತಿ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಕಾರ್ಯಾಗಾರದಲ್ಲಿ ಗವಿಮಠದ ಶ್ರೀ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 11:19 IST
Last Updated 8 ಆಗಸ್ಟ್ 2021, 11:19 IST
ಕೊಪ್ಪಳದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ  ಆಯೋಜಿಸಲಾಗಿದ್ದ 'ಜ್ಞಾನಜ್ಯೋತಿ' ಶೈಕ್ಷಣಿಕ ಗುಣಮಟ್ಟ ಸುಧಾರಣಾ ಕಾರ್ಯಾಗಾರದಲ್ಲಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಿತ್ತಿಪತ್ರ ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ಸಿಇಒ ಫೌಜೀಯಾ ತರುನ್ನುಮ್ ಮುಂತಾದವರು ಇದ್ದಾರೆ
ಕೊಪ್ಪಳದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ  ಆಯೋಜಿಸಲಾಗಿದ್ದ 'ಜ್ಞಾನಜ್ಯೋತಿ' ಶೈಕ್ಷಣಿಕ ಗುಣಮಟ್ಟ ಸುಧಾರಣಾ ಕಾರ್ಯಾಗಾರದಲ್ಲಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಿತ್ತಿಪತ್ರ ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ಸಿಇಒ ಫೌಜೀಯಾ ತರುನ್ನುಮ್ ಮುಂತಾದವರು ಇದ್ದಾರೆ   

ಕೊಪ್ಪಳ: ಶಿಕ್ಷಕರು ಮಕ್ಕಳಿಗೆ ಭಾಷೆಯ ಕೌಶಲ ಕಲಿಸಬೇಕು. ಭಾಷೆಯ ಕುರಿತು ಪ್ರೇಮ ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಜ್ಞಾನಜ್ಯೋತಿ’ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಾಲಾ ಆಡಳಿತ ಕಾಳಜಿ ವಹಿಸಬೇಕು. ಉತ್ತಮ ನಾಯಕರನ್ನು ಸಮಾಜಕ್ಕೆ ಕೊಡುವ ಶಕ್ತಿ ಮುಖ್ಯೋಪಾಧ್ಯಾಯರಿಗೆ ಇದೆ. ವಿದ್ಯಾರ್ಥಿಗಳು ಜೀವನಪೂರ್ತಿ ಮರೆಯಲಾಗದ ಶಿಕ್ಷಣವನ್ನು ಕಲಿಯುವುದು ಶಾಲಾ ಮಟ್ಟದಲ್ಲಿ. ಹಾಗಾಗಿ ಅವರಿಗೆ ಸಮನ್ವಯತೆ ಮತ್ತು ಏಕಾಗ್ರತೆ ಕಡೆಗೆ ಕರೆದುಕೊಂಡು ಹೋಗಬೇಕು ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಶಿಕ್ಷಕರು ಎಂದರೆ ಜಗತ್ತಿಗೆ ಜ್ಞಾನದಾಸೋಹವನ್ನು ಮಾಡುವಂತವರು. ಅವರು ಮಕ್ಕಳಿಗೆ ಉತ್ತಮ ಹಾದಿಯತ್ತ ಕೊಂಡೊಯ್ಯಬೇಕು. ತಮ್ಮ ವೃತ್ತಿ, ವಿಷಯ, ಶಾಲೆ, ಶಿಕ್ಷಣ, ವಿದ್ಯಾರ್ಥಿಗಳನ್ನು ಪ್ರೇಮಿಸಬೇಕು. ಇಲ್ಲವಾದರೆ ವೃತ್ತಿಯು ಪರಿಪೂರ್ಣವಾಗುವುದಿಲ್ಲ ಎಂದರು.

ಅಲೆಕ್ಸಾಂಡರ್ ಮಹಾರಾಜನಾಗಿದ್ದರೂ ಕೂಡ ತನ್ನ ಗುರು ತತ್ವಜ್ಞಾನಿ ಅರಿಸ್ಟಾಟಲ್‌ಗೆ ಗೌರವವನ್ನು ಕೊಡುತ್ತಿದ್ದ. ಹಾಗಾಗಿ ಒಬ್ಬ ಗುರು ಮಹಾರಾಜನಿಗಿಂತಲೂ ಮಿಗಿಲಾಗಿದ್ದಾನೆ. ವಸ್ತು, ಸಂಪತ್ತು ಎಂದಾದರೂ ಒಂದು ದಿನ ನಾಶವಾಗಬಹುದು. ಆದರೆ, ಜ್ಞಾನ ನಾಶವಾಗುವುದಿಲ್ಲ. ಶಿಕ್ಷಕ ಸದಾ ಹೊಸತನ್ನು ಕಲಿಯುವ ಉತ್ಸಾಹ, ಸೃಜನಾತ್ಮಕತೆಯನ್ನು ಮಕ್ಕಳಿಗೆ ಹೇಳಿ ಕೊಡಬೇಕು. ಶಿಕ್ಷಕ ಬೆಳಗುವ ದೀಪವಾದರೆ, ವಿದ್ಯಾರ್ಥಿ ಆರದ ದೀಪವಿದ್ದಂತೆ ಎಂದರು.

ಯಂತ್ರದ ಜೊತೆ ಕೆಲಸ ಮಾಡುವವನು ಎಂಜಿನಿಯರ್, ಜೀವಂತ ದೇವರಗಳ ಜೊತೆ ಕೆಲಸ ಮಾಡುವವರು ಗುರುಗಳು. ಹಾಗಾಗಿ ಗುರುವಿನ ಕೆಲಸ ಸಾರ್ಥಕವಾಗುತ್ತದೆ. ವೃತ್ತಿಯ ಬಗ್ಗೆ ಗೌರವ ಇರಬೇಕು, ವಿಷಯವನ್ನು ಪ್ರೀತಿಸಬೇಕು. ಇದಕ್ಕಾಗಿಯೇ ಬದುಕುತ್ತೇನೆ ಎನ್ನುವಂತಿರಬೇಕು. ಬಾಗುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಶೈಕ್ಷಣಿಕ ಗುಣಮಟ್ಟ ಸುಧಾರಣಾ ಮಟ್ಟಕ್ಕೆ ತಲುಪಲು ಶಿಕ್ಷಣಾಧಿಕಾರಿಗಳು, ಮುಖ್ಯಶಿಕ್ಷಕರು ಹಾಗೂ ಪೋಷಕರ ಸಹಕಾರ ಅಗತ್ಯವಿದೆ. ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಸ್ಫೂರ್ತಿ ಬಿಂದು (ಜಿಲ್ಲಾ ಶೈಕ್ಷಣಿಕ ಕಾರ್ಯಪಡೆ), ಕಲಿಕಾ ಮಿತ್ರ (ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು), ಮುಖ್ಯಶಿಕ್ಷಕರ ಜವಾಬ್ದಾರಿ ಹಾಗೂ ಕರ್ತವ್ಯ, ಸಹಶಿಕ್ಷಕರ ಕರ್ತವ್ಯ ಹಾಗೂ ಜವಾಬ್ದಾರಿ, ಪರೀಕ್ಷೆಗಳ ಆಯೋಜನೆ, ವಿಶೇಷ ಪಠ್ಯ ರಚನೆ ಸೇರಿದಂತೆ ಇತರೆ ವಿಶಿಷ್ಟ ಕಾರ್ಯಕ್ರಮ ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯ ವಿಷಯವಾರು ಕಲಿಕೆಗೆ ಸಹಕರಿಸಬೇಕು ಎಂದರು.

ವ್ಯಕ್ತಿತ್ವ ವಿಕಸನ ತರಬೇತಿದಾರ ಅಶೋಕ ಅಂಚಾಲಿ ಉಪನ್ಯಾಸ ನೀಡಿದರು.ಪ್ರೊಬೆಷನರಿ ಐಎಎಸ್ ಅಧಿಕಾರಿ ಹೇಮಂತಕುಮಾರ ಎನ್.,ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ, ಡಯಟ್‌ನ ಉಪನಿರ್ದೇಶಕ ಶ್ಯಾಮಸುಂದರ, ಜಿ.ಪಂ. ಮುಖ್ಯಲೆಕ್ಕಾಧಿಕಾರಿ ಅಮೀನ್ ಅತ್ತಾರ್, ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಇದ್ದರು.

ಹೇಳಿಕೆ..

ಗುರುವಿಗೆ ಹೃದಯದಿಂದ ಕರುಣೆ ತುಂಬಿ ಹರಿಯಬೇಕು. ಅಂತರಂಗದಲ್ಲಿ ಪ್ರೇಮ ತುಂಬಿರಬೇಕು. ಯಾವುದಕ್ಕಾದರೂ ಕಿಮ್ಮತ್ತು ಕಟ್ಟಬಹುದು ಆದರೆ, ಪ್ರೇಮಕ್ಕೆ ಕಿಮ್ಮತ್ತು ಕಟ್ಟಬೇಡಿ. ಪ್ರೇಮವಿರುವ ಶಿಕ್ಷಕ ವಿದ್ಯಾರ್ಥಿಗಳ ಹೃದಯದಲ್ಲಿ ಇರುತ್ತಾನೆ
ಅಭಿನ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.