ಕುಷ್ಟಗಿ: ಪಟ್ಟಣದಲ್ಲಿ ಭಾನುವಾರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ತುರುಸಿನ ಮತದಾನ ನಡೆದಿದ್ದು ಚುನಾವಣಾಧಿಕಾರಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಸಾಮಾನ್ಯ ಕ್ಷೇತ್ರ: ಶರಣಪ್ಪ ತೆಮ್ಮಿನಾಳ, ಮುಕ್ಕಣ್ಣ ಹುಬ್ಬಳ್ಳಿ, ಮಲ್ಲಪ್ಪ ಕುದರಿ, ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಬೀರಪ್ಪ ಕುರಿ, ಹೈದರಲಿ ಜಾಲಿಹಾಳ, ರುದ್ರಪ್ಪ ಬೂದಿಹಾಳ, ಅಮರೇಗೌಡ ಸಣ್ಣಗಂಗಪ್ಪನವರ, ಸಿದ್ರಾಮಪ್ಪ ಅಮರಾವತಿ. ದಂಡಪ್ಪ ಹೊಸಮನಿ (ಪರಿಶಿಷ್ಟ ಜಾತಿ). ಬಸವರಾಜ ಗುಡಗೇರಿ (ಹಿಂದುಳಿದ ವರ್ಗ-ಅ). ಮಹಿಳಾ ಕ್ಷೇತ್ರದಿಂದ ರುದ್ರಮ್ಮ ಗುತ್ತೂರು ಮತ್ತು ಉಮಾ ನಾಗೂರು ಚುನಾಯಿತರಾಗಿದ್ದಾರೆ.
ತುರುಸಿನ ಸ್ಪರ್ಧೆ: 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 20 ಜನ ಕಣದಲ್ಲಿದ್ದರು. ಒಟ್ಟು 468 ಅರ್ಹ ಮತದಾರರ ಪೈಕಿ 458 ಜನ ಮತಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ಮತಗಟ್ಟೆ ಬಳಿ ಶಿಕ್ಷಕರು ಬರುತ್ತಿದ್ದಂತೆ ತಮ್ಮನ್ನು ಬೆಂಬಲಿಸುವಂತೆ ಗೋಗರೆಯುತ್ತಿದ್ದುದು ಕಂಡುಬಂದಿತು. ಇದೇ ಮೊದಲ ಬಾರಿಗೆ ಶಿಕ್ಷಕರ ಪತ್ತಿನ ಸಹಕಾರ ಸಂಘದ ಚುನಾವಣೆ ತುರುಸಿನಿಂದ ಕೂಡಿತ್ತು. ಶಿಕ್ಷಕರಲ್ಲಿ ಈ ಚುನಾವಣೆ ಎರಡು ಮೂರು ಬಣಗಳನ್ನು ಸೃಷ್ಟಿಸಿದ್ದು ಮತದಾನದ ಹಕ್ಕು ಹೊಂದಿರುವ ಷೇರುದಾರ ಶಿಕ್ಷಕರನ್ನು ಒಲಿಸಿಕೊಳ್ಳುವಲ್ಲಿ ಅಭ್ಯರ್ಥಿಗಳು ತರಹೇವಾರಿ ರೀತಿಯಲ್ಲಿ ಕಸರತ್ತು ನಡೆಸಿದರು. ದೂರದ ಊರುಗಳಿಂದ ಮತದಾರರನ್ನು ಕರೆತರುವುದಕ್ಕೆ ಎರಡೂ ಗುಂಪಿನವರು ವಾಹನ, ಊಟ, ಇತರೆ ಉಪಚಾರದ ವ್ಯವಸ್ಥೆಯನ್ನೂ ಕಲ್ಪಿಸಿದ್ದು ಕಂಡುಬಂದಿತು.
ಅಲ್ಲದೆ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಿದ್ದು ಎರಡು ಗುಂಪಿನವರು ಸಭ್ಯವಲ್ಲದ ಭಾಷೆಯಲ್ಲಿ ಎದುರಾಳಿಗಳ ವಿರುದ್ಧ ಬರೆದುಕೊಳ್ಳುವ ಮೂಲಕ ಶಿಕ್ಷಕ ಸ್ಥಾನದ ಗೌರವಕ್ಕೆ ತಾವೇ ಚ್ಯುತಿ ತರುವಂತೆ ನಡೆದುಕೊಂಡರು ಎಂದು ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರು, ಚುನಾವಣೆಯಲ್ಲಿ ನಿರತರಾದವರು ಪಕ್ಕಾ ರಾಜಕಾರಣಿಗಳಂತೆ ವರ್ತಿಸುತ್ತಿದ್ದುದು ಅಸಹ್ಯ ಹುಟ್ಟಿಸುವಂತ್ತಿತ್ತು ಎಂದರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಪ್ರಕಾಶ ಸಜ್ಜನ, ಸಹಾಯಕ ಚುನಾವಣಾಧಿಕಾರಿಯಾಗಿ ಪ್ರದೀಪ ಗಂಟಿ ಕರ್ತವ್ಯ ನಿರ್ವಹಿಸಿದರು. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಸಬ್ ಇನ್‌ಸ್ಪೆಕ್ಟರ್ ಹನುಮಂತಪ್ಪ ತಳವಾರ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.