ADVERTISEMENT

ಭಟ್ಕಳ ಅವಘಡ: ಶಿಕ್ಷಕರಿಗೆ ಪ್ರಯಾಸವಾದ ಶೈಕ್ಷಣಿಕ ಪ್ರವಾಸ

ಭಟ್ಕಳ ಅವಘಡ ಬಳಿಕ ಪ್ರವಾಸಕ್ಕೆ ತೆರಳುವ ಶಾಲೆಗಳಿಗೆ ಕಟ್ಟೆಚ್ಚರ, ಆರು ಜನ ಶಿಕ್ಷಕರ ಅಮಾನತು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 6:06 IST
Last Updated 22 ಡಿಸೆಂಬರ್ 2024, 6:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಪ್ಪಳ: ಶೈಕ್ಷಣಿಕ ಪ್ರವಾಸದ ವೇಳೆ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಗಾಣದಾಳ ಗ್ರಾಮದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಶಿಕ್ಷಕರ ಪಾಲಿಗೆ ಪ್ರವಾಸ ಪ್ರಯಾಸವಾಗಿದೆ. ಹೀಗಾಗಿ ಹಲವು ಶಾಲೆಗಳು ಪ್ರವಾಸಕ್ಕೆ ತೆರಳಲು ಹಿಂದೇಟು ಹಾಕುತ್ತಿವೆ.

ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಡಿ. 18ರಿಂದ 21ರ ತನಕ ಎರಡು ಬಸ್‌ಗಳಲ್ಲಿ 100 ಜನ ವಿದ್ಯಾರ್ಥಿಗಳು, 11 ಶಿಕ್ಷಕರು ಪ್ರವಾಸಕ್ಕೆ ತೆರಳಲು ಇಲಾಖೆಯಿಂದ ಅನುಮತಿ ಪಡೆದಿದ್ದರು. ಆದರೆ, ಪ್ರವಾಸಕ್ಕೆ ತೆರಳುವಾಗ 13 ಜನ ಶಿಕ್ಷಕರು ಮತ್ತು ಇಬ್ಬರು ಅಡುಗೆ ಸಿಬ್ಬಂದಿಯನ್ನೂ ಕರೆದುಕೊಂಡು ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ತೆರಳಿದ್ದಾಗ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ಹರಿಜನ ರಾತ್ರಿ ಸಮಯದಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾನೆ.

ADVERTISEMENT

ಈ ಘಟನೆ ಮಗುವಿನ ಪೋಷಕರ ಹಾಗೂ ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಿರುಪಾದಿ ಹರಿಜನ ಸಾವಿಗೆ ಶಿಕ್ಷಕರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಯ ಪೋಷಕರು ಭಟ್ಕಳದಲ್ಲಿ ಪ್ರತಿಭಟನೆ ನಡೆಸಿದ್ದರು. ಕಳೆದ ವಾರವಷ್ಟೇ ಮುರುಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದರು. ಈಗ ಮತ್ತೊಬ್ಬ ವಿದ್ಯಾರ್ಥಿ ಬಲಿಯಾಗಿದ್ದು ಪೋಷಕರ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ.

ಆದ್ದರಿಂದ ಕಠಿಣ ಕ್ರಮ ಜರುಗಿಸಿರುವ ಶಾಲಾ ಶಿಕ್ಷಣ ಇಲಾಖೆ ಶಾಲೆಯ ಪ್ರಭಾರ ಮುಖ್ಯ ಗುರು ಸೇರಿದಂತೆ ಆರು ಜನ ಶಿಕ್ಷಕರನ್ನು ಅಮಾನತು ಮಾಡಿ ಡಿಡಿಪಿಐ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಪೂರ್ವದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಇಲಾಖೆ ವಿವರವಾಗಿ ಸುತ್ತೋಲೆ ಹೊರಡಿಸಿ ಆದೇಶ ಜಾರಿ ಮಾಡಿದೆ. ಶೈಕ್ಷಣಿಕ ಪ್ರವಾಸದ ಸಮಯದಲ್ಲಿ ವಿದ್ಯಾರ್ಥಿಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರ ಮೇಲಿರುತ್ತದೆ. ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಪ್ರಭಾರ ಮುಖ್ಯ ಶಿಕ್ಷಕ ಹನುಮೇಶ ಬೆಲ್ಲದ, ಸಹ ಶಿಕ್ಷಕರಾದ ಶಿವಕುಮಾರ ಅವಸಂಗರದ, ನಾಗರಾಜ ಶೆಟ್ಟರ್‌, ಅಮರೇಶ ಬಳ್ಳಾರಿ, ಈರಮ್ಮ ಬಡಿಗೇರ ಮತ್ತು ಪದ್ಮಾವತಿ ಪವಾರ ಅವರನ್ನು ಅಮಾನತು ಮಾಡಲಾಗಿದೆ.

ಮೇಲಿಂದ ಮೇಲೆ ನಡೆಯುತ್ತಿರುವ ಅವಘಡಗಳು ಮತ್ತು ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಹಲವು ಶಾಲೆಗಳ ಶಿಕ್ಷಕರು ಪ್ರವಾಸದ ಗೊಡವೆಯೇ ಬೇಡವೆಂದು ದೂರ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರವಾಸದ ವೇಳೆ ಅವಘಡ ನಡೆದರೆ ಅದಕ್ಕೆ ಶಾಲೆಯ ಶಿಕ್ಷಕರೇ ಹೊಣೆ ಹೊರಬೇಕು, ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಶಿಕ್ಷಣಾಧಿಕಾರಿಗಳು ಈಗಾಗಲೇ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.