ಅಳವಂಡಿ: ಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ್ಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿಠಲ್ ಚೌಗಲೆ, ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಿಲಾಸ್ ಬೋಸ್ಲೆ ಅವರು ಭೇಟಿ ನೀಡಿ ಗ್ರಾಮಸ್ಥರ ಜತೆ ಚರ್ಚಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಗ್ರಾಮಕ್ಕೆ ನೀರು ಬಿಡಲು ನೀರುಗಂಟಿ ನೇಮಕ ಹಾಗೂ ಬೋರ್‌ವೆಲ್‌ನಿಂದ ಬಿಡುವ ನೀರನ್ನು ಸಂಗ್ರಹಿಸಲು ಟ್ಯಾಂಕ್ ಇಲ್ಲ. ಇದರಿಂದ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವರಿಕೆ ಮಾಡಿಕೊಂಡರು. ನಂತರ ಮಾತನಾಡಿದ ಅಧಿಕಾರಿಗಳು, ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿ ಹಾಗೂ ಗ್ರಾಮದಲ್ಲಿ ಒಎಚ್‌ಟಿ ಟ್ಯಾಂಕ್ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ ಶಾಲೆಯ ಕಾಂಪೌಂಡ್ ಹಾಗೂ ಅದರ ಜಾಗದ ತಕರಾರು, ಗ್ರಾಮದಲ್ಲಿ ಚರಂಡಿ ಮತ್ತು ರೈತರ ಜಮೀನಿಗೆ ತೆರಳಲು ಆಗುತ್ತಿರುವ ರಸ್ತೆ ಸಮಸ್ಯೆಯ ಕುರಿತು ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದರು. ಎಲ್ಲಾ ಸಮಸ್ಯೆಗಳನ್ನೂ ಹಂತ ಹಂತವಾಗಿ ಶೀಘ್ರವೇ ಇತ್ಯರ್ಥ ಪಡಿಸಲಾಗುವುದು ಎಂದು ತಹಶೀಲ್ದಾರ್ ವಿಠಲ್ ಚೌಗಲೆ ಹಾಗೂ ತಾ.ಪಂ ಇಒ ದುಂಡಪ್ಪ ತುರಾದಿ ತಿಳಿಸಿದರು.
ಕಂದಾಯ ನಿರೀಕ್ಷಕ ಸುರೇಶ, ಗ್ರಾಮ ಆಡಳಿತಾಧಿಕಾರಿ ಮಲ್ಲಮ್ಮ, ಪಿಡಿಒ ರತ್ನಮ್ಮ ಕಂಬಳಿ, ಗ್ರಾಮ ಸಹಾಯಕ ಹನುಮಂತ ವಾಲಿಕಾರ, ಗ್ರಾ.ಪಂ ಸಿಬ್ಬಂದಿ ಲಕ್ಷ್ಮಣ್ಣ, ಪ್ರಮುಖರಾದ ಬಸವರಾಜ ಹಾರೋಗೇರಿ, ಅಂದಾನಗೌಡ ಪೋಲಿಸ್ ಪಾಟೀಲ, ಕೋಟ್ರೇಶ ಮೇಗಳಮನಿ, ಮೋದಿನಸಾಬ ಆಲೂರು, ಜಂಗ್ಲಿಸಾಬ ಒಂಟಿ, ಶಿವರಡ್ಡಿ ಮೆಗಳಮನಿ, ದೇವಪ್ಪ, ದೇವರಾಜ್, ಆನಂದ, ಮಲ್ಲಿಕಾರ್ಜುನ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.